ಬೆಂಗಳೂರು: ಕಣ್ಣಿಗೆ ಕಾಣದೇ, ಅರಿವಿಗೆ ಬರದೇ ಮನುಷ್ಯರಿಗೆ ತಗುಲುವ ಕೊರೊನಾ ವೈರಸ್ಗೆ ಕೇವಲ ಸೋಂಕಿತರಷ್ಟೇ ಅಲ್ಲ. ಕೋವಿಡೇತರ ರೋಗಿಗಳು ಸಹ ಚಿಕಿತ್ಸೆಗಾಗಿ ಪರದಾಡಿದ್ರು. ಅದರಲ್ಲೂ ಗರ್ಭಿಣಿಯರು ಪಾಡು ಯಾರಿಗೂ ಬೇಡ. ಯಾಕೆಂದರೆ, ಅವರನ್ನು ಇತರೆ ರೋಗಿಗಳಂತೆ ಆಸ್ಪತ್ರೆಗೆ ಬರುವುದನ್ನು ತಪ್ಪಿಸುವುದಾಗಲಿ, ಮುಂದೂಡುವುದಾಗಲಿ ಅಸಾಧ್ಯ. ಗರ್ಭಿಣಿಯರ ಸದ್ಯದ ಪರಿಸ್ಥಿತಿ ಹೇಗಿದೆ ನೋಡೋಣ.
ಕೊರೊನಾ ಪ್ರೇರಿತ ಲಾಕ್ಡೌನ್ ಸಂದರ್ಭದಲ್ಲಿ ಕೋವಿಡೇತರ ರೋಗಿಗಳ ಜೊತೆಗೆ ಗರ್ಭಿಣಿಯರು ಸಹ ಚಿಕಿತ್ಸೆಗಾಗಿ ಪರದಾಡಿದ್ರು. ಆದರೆ, ತುಂಬು ಗರ್ಭಿಣಿಯರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಸದ್ಯ ಇದಕ್ಕೆಲ್ಲಾ ಮುಕ್ತಿ ಸಿಕ್ಕಿದೆ. ಆಸ್ಪತ್ರೆಗಳತ್ತ ಗರ್ಭಿಣಿಯರು ಹೆಜ್ಜೆ ಹಾಕುತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 2,412 ಮಂದಿ ಗರ್ಭಿಣಿಯರಿಗೆ, ಇದೇ ಅವಧಿಯಲ್ಲಿ ದಾವಣಗೆರೆ ಸರ್ಕಾರಿ ಆಸ್ಪತ್ರೆಗಳಲ್ಲಿ 5,009 ಹೆರಿಗೆ ಮಾಡಿಸಲಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ 1,696 ಹೆರಿಗೆಯಾಗಿವೆ. ಬಳ್ಳಾರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈವರೆಗೆ 101 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ.
ರಾಯಚೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲೇ ಗರ್ಭಿಣಿಯರು ಹೆರಿಗೆ ಮಾಡಿಸಿಕೊಂಡಿದ್ರೆ, ದಾವಣಗೆರೆಯಲ್ಲಿ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು ಹೆರಿಗೆಯಾಗಿರುವ ಕುರಿತು ವರದಿಯಾಗಿದೆ. ಆದರೂ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ, ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದು, ಅವು ಹೆರಿಗೆಗೆ ಹೆಚ್ಚು ಹಣ ಪೀಕುತ್ತಿವೆ ಎಂಬ ದೂರಿದೆ. ಆದರೆ, ಹಾಗೇನು ಇಲ್ಲವಲ್ಲ ಅಂತಿದ್ದಾರೆ ವೈದ್ಯಾಧಿಕಾರಿಗಳು.
ಸರ್ಕಾರಿ ಆಸ್ಪತ್ರೆಯಲ್ಲಿ ಎಷ್ಟರ ಮಟ್ಟಿಗೆ ಗರ್ಭಿಣಿಯರಿಗೆ ಸಮಪರ್ಕ ಚಿಕಿತ್ಸೆ ದೊರೆಯುತ್ತಿದೆ ಅನ್ನೋದು ಗೊಂದಲವುಂಟು ಮಾಡಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ಶುಲ್ಕ ವಿಧಿಸಲು ಸೂಚಿಸಬೇಕು. ಬಡವರು, ನಿರ್ಗತಿಕ ಗರ್ಭಿಣಿಯರಿಗೆ ಅಲ್ಲಿ ಉಚಿತ ಹೆರಿಗೆ ಮಾಡಿಸುವಂತೆ ಆದೇಶಿಸಬೇಕು ಎಂಬುದು ಜನರ ಒತ್ತಾಯ.