ಬೆಂಗಳೂರು: ರಾಜಧಾನಿಯಲ್ಲಿರುವ ಬಹುತೇಕ ಮಸೀದಿಗಳಲ್ಲಿ ನಿಷೇಧಿತ ಅವಧಿಯಲ್ಲಿ ಮೈಕ್ ಬಳಸಿ ಶಬ್ದ ಮಾಲಿನ್ಯವಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ನೇತೃತ್ವದ ನಿಯೋಗ ಪೊಲೀಸ್ ಕಮಿಷನರ್ ಕಮಲ್ ಪಂತ್ಗೆ ದೂರು ನೀಡಿದೆ.
ಆಯುಕ್ತರಿಗೆ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ಶಬ್ದ ಮಾಲಿನ್ಯ ಹೆಚ್ಚಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗೈಡ್ ಲೈನ್ಸ್ ಹಾಗೂ ಹೈಕೋರ್ಟ್ ಆದೇಶವಿದ್ದರೂ ಮಸೀದಿ ಸೇರಿದಂತೆ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಆಂಪ್ಲಿಫೈಡ್ ಬಳಸಿ ಶಬ್ದ ಮಾಡಬಾರದೆಂದು ದೇಶದ ವಿವಿಧ ನ್ಯಾಯಾಲಯಗಳು ಆದೇಶಿಸಿವೆ. ಆದರೆ ನಗರದಲ್ಲಿರುವ ಬಹುತೇಕ ಮಸೀದಿಗಳಲ್ಲಿ ಮೈಕ್ ಇಟ್ಟು ಆಜಾನ್ ಮಾಡ್ತಿದ್ದಾರೆ. ಮುಂಜಾನೆ 5 ಗಂಟೆಗೆ ಆಜಾನ್ ಕೂಗುತ್ತಾರೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಜಾರಿ ಮಾಡುವಂತೆ ಕಮೀಷನರ್ ಗೆ ದೂರು ನೀಡಿದ್ದೇವೆ ಎಂದರು.
ಇದನ್ನೂ ಓದಿ: ಆಜಾನ್‌ಗೆ ಅಪಸ್ವರ.. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ, ಎಲ್ಲವೂ ಹಳೆಯದೇ : ಸಿಎಂ ಬೊಮ್ಮಾಯಿ
ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ವಿಚಾರವಾಗಿ, ಎಸಿಪಿಗಳಿಗೆ ಸೂಚನೆ ನೀಡಲಾಗುತ್ತದೆ. ನಿರ್ದಿಷ್ಟ ಕ್ರಮ ಕೈಗೊಳ್ಳುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಆಜಾನ್ ಪರವಾಗಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್ ನಿರ್ದೇಶನ ಪಾಲಿಸುವುದು ಬೇಡವೇ? ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಾರೆ ನಾನು ಆಜಾನ್ ಕೇಳಿ ಬೆಳೆದಿದ್ದೇನೆ ಅಂತ. ಆದರೆ ಅದು ಖಂಡಿತ ಸುಳ್ಳು. ಅವರು ಬೆಳೆದಿರೋದು 65 ಎಕರೆ ಪ್ರದೇಶದಲ್ಲಿರುವ ಮನೆಯಲ್ಲಿ. ಅವರಿಗೆ ಅಲ್ಲಿ ಆಜಾನ್ ಕೇಳಿಸೋದಿಲ್ಲ ಅಂತ ಟಾಂಗ್ ನೀಡಿದರು.