ಬೆಂಗಳೂರು: ಸದನದ ಸಂಪ್ರದಾಯ ಉಲ್ಲಂಘಿಸಿ ಸಭಾಪತಿಗಳ ಪೀಠವನ್ನು ಅಸಂಸದೀಯ ನಡವಳಿಕೆಯಿಂದ ಅತಿಕ್ರಮವಾಗಿ ಅಲಂಕರಿಸಿ ಮೇಲ್ಮನೆಯ ಗೌರವವನ್ನು ಹಾಳು ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸದಸ್ಯರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಸಭಾಪತಿಗಳಿಗೆ ಸುದೀರ್ಘವಾಗಿ ಪತ್ರ ಬರೆದಿರುವ ಅವರು, ನಮ್ಮ ರಾಜ್ಯದ ಸದನದ ಕಾರ್ಯವೈಖರಿಯನ್ನು ಬೇರೆ ಬೇರೆ ರಾಜ್ಯಗಳ ವಿಧಾನ ಪರಿಷತ್ಗಳು ಅನುಕರಿಸುತ್ತಿರುವುದು ಶ್ಲಾಘನೀಯ. ಆದರೆ ದುರಂತವೆಂಬಂತೆ ಡಿ. 15ರಂದು ನಡೆದ ಅಹಿತಕರ ಘಟನೆಯಿಂದ ಹಲವಾರು ಹಿರಿಯ ಮುತ್ಸದ್ಧಿ ನಾಯಕರು ಪ್ರತಿನಿಧಿಸಿದ್ದ ಸದನದ ಘನತೆ, ಗೌರವ, ಸಂಪ್ರದಾಯ, ಕಾನೂನು ಎಲ್ಲವನ್ನೂ ಗಾಳಿಗೆ ತೂರಿ ರಾಜ್ಯದ ಗೌರವವನ್ನು ಕಳೆದಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೆ ಸಂವಿಧಾನ, ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಧಿಕಾರ ದಾಹಕ್ಕೆ ಡಿಸೆಂಬರ್ 15ರಂದು ಚಿಂತಕರ ಚಾವಡಿ ವಿಧಾನ ಪರಿಷತ್ ಬಲಿಯಾಯಿತು. ತಮ್ಮ ಸರ್ಕಾರದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಜೆಡಿಎಸ್ ಪಕ್ಷದ ಸದಸ್ಯರಿಗೆ ಆಮಿಷವೊಡ್ಡಿ ಸದನದಲ್ಲಿ ಅಸಂಸದೀಯ ಮಾರ್ಗದ ಮೂಲಕ ಅಧಿಕಾರ ಸ್ಥಾಪಿಸಲು ಬಿಜೆಪಿ ಪಕ್ಷದ ಪರಿಷತ್ ಸದಸ್ಯರು ಹಾಗೂ ಸಚಿವರು ಸದನದೊಳಗೆ ಗೊಂದಲ ಸೃಷ್ಟಿ ಮಾಡಿಸಿದರು.
ಡಿಸೆಂಬರ್ 15ರ ಬೆಳಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಸಂಪ್ರದಾಯದಂತೆ ಸದನ ಆರಂಭವಾದಾಗ ಸದಸ್ಯರೆಲ್ಲರೂ ನಿರೀಕ್ಷಿಸಿರದ ಘಟನೆಯೆಂಬಂತೆ ಘಂಟೆ ಮೊಳಗುವ ಮುನ್ನವೇ ಏಕಾಏಕಿ ಕೆಲವು ಸಚಿವರ ಕುಮ್ಮಕ್ಕಿನಿಂದ ಉಪಸಭಾಪತಿಗಳು ಸಂಪ್ರದಾಯ ಮುರಿದು ಸಭಾಪತಿಗಳ ಪೀಠದಲ್ಲಿ ಆಸೀನರಾಗಿದ್ದನ್ನು ಕಂಡು ನಮಗೆ ದಿಗ್ಭ್ರಮೆಯಾಯಿತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.