ಬೆಂಗಳೂರು: ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎನ್ನುವ ಕಾರಣಕ್ಕೆ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿರುವ ರಾಜ್ಯದ ಗ್ರಾಮ ಪಂಚಾಯತ್ಗಳ ಚುನಾವಣೆ ಮುಂದೂಡಿಕೆ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಹೌದು, ಜೂನ್ನಲ್ಲಿ ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಈಗ ಚುನಾವಣೆ ನಡೆದಲ್ಲಿ ಆಡಳಿತಾರೂಢ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲಿದೆ ಎಂದು ಗುಪ್ತಚರ ಇಲಾಖೆ ನೀಡಿರುವ ವರದಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಹಾಗಾಗಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಿಸಿ ಸದ್ಯಕ್ಕೆ ಚುನಾವಣಾ ಹಿನ್ನಡೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಬಜೆಟ್ ಘೋಷಿತ ಯೋಜನೆಗಳ ಜಾರಿಯೂ ಆಗಿಲ್ಲ. ಇದರ ನಡುವೆ ಬರಗಾಲ, ರೈತರ ಸಮಸ್ಯೆ, ಕೊರೊನಾ ಸಂಕಷ್ಟದಿಂದ ಜನರು ಸರ್ಕಾರದ ವಿರುದ್ಧ ನಿಲುವು ತಾಳಲಿದ್ದಾರೆ ಎನ್ನುವ ಭಯ ಸರ್ಕಾರಕ್ಕೆ ಶುರುವಾಗಿದೆ ಎನ್ನಲಾಗಿದೆ.
ಒಂದು ವೇಳೆ ಚುನಾವಣೆ ನಡೆದು ಹಿನ್ನಡೆಯಾದಲ್ಲಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಪಕ್ಷದ ಗುರುತಿನ ಮೇಲೆ ಚುನಾವಣೆ ನಡೆಯದೆ ಇದ್ದರೂ ರಾಜಕೀಯ ಪಕ್ಷಗಳ ಪ್ರಭಾವ ಇಲ್ಲದೇ ಚುನಾವಣೆ ನಡೆಯಲ್ಲ, ಪಕ್ಷದ ಬೆಂಬಲಿಗರೇ ಕಣಕ್ಕಿಳಿದಿರುತ್ತಾರೆ. ಹಾಗಾಗಿ ಫಲಿತಾಂಶ ಪಕ್ಷದ ಬೆಂಬಲವನ್ನೇ ತೋರಿಸಲಿದೆ. ಬಿಜೆಪಿಗೆ ಹಿನ್ನಡೆಯಾದರೆ ಪ್ರತಿ ಪಕ್ಷಗಳು ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಬೇಡ, ಬದಲಾಗಿ ಬಿಜೆಪಿ ಬೆಂಬಲಿತರಿಗೆ ಅವಕಾಶ ನೀಡಬೇಕು ಎನ್ನುವ ಚಿಂತನೆ ನಡೆದಿದೆ.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವರು, ಅಧಿಕಾರಿಗಳ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಭಾಗವಹಿಸಿದ್ದರು. ಇದು ಗ್ರಾಮ ಪಂಚಾಯತ್ಗಳಿಗೆ ಆಡಳಿತ ಸಮಿತಿ ರಚಿಸಿ, ಬಿಜೆಪಿ ಬೆಂಬಲಿತರನ್ನೇ ನೇಮಕ ಮಾಡಿ ಭವಿಷ್ಯದ ಚುನಾವಣೆಯನ್ನು ಗೆಲ್ಲಲು ಅಗತ್ಯ ವೇದಿಕೆ ಸಿದ್ದಪಡಿಸಿಕೊಳ್ಳುವ ಪ್ರಯತ್ನ ನಡೆಸಿತು ಎನ್ನುವುದಕ್ಕೆ ಪುಷ್ಟಿ ನೀಡಿದೆ.
ಇನ್ನು ಗ್ರಾಮ ಪಂಚಾಯತ್ಗಳಿಗೆ ಆಡಳಿತ ಸಮಿತಿ ರಚಿಸುವ ಕುರಿತು ಸರ್ಕಾರದಿಂದ ಚಿಂತನೆ ನಡೆಯುತ್ತಿದ್ದಂತೆ, ಪ್ರತಿಪಕ್ಷ ಕಾಂಗ್ರೆಸ್ ಹಾಗು ಜೆಡಿಎಸ್ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ನೇಮಕ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಟೀಕಿಸಿವೆ. ಆದರೆ, ಪ್ರತಿಪಕ್ಷಗಳ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಗ್ರಾಮ ಪಂಚಾಯತ್ಗಳನ್ನು ಹೇಗೆ ನಡೆಸಬೇಕು ಎನ್ನುವ ಸಂಬಂಧ ಚರ್ಚಿಸಲು ಬಿಜೆಪಿ ನಿಯೋಗ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು ಎಂದು ಬಿಜೆಪಿ ಮಧ್ಯಪ್ರವೇಶ ಮಾಡಿರುವುದನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪರೋಕ್ಷವಾಗಿ ಒಪ್ಪಿಕೊಂಡರು.
ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕಾನೂನಿನಲ್ಲಿ ಯಾವ ರೀತಿ ಅವಕಾಶ ನೀಡಬಹುದು ಎನ್ನುವ ಕುರಿತು ಚರ್ಚಿಸಿ ಕ್ಯಾಬಿನೆಟ್ನಲ್ಲಿ ನಿರ್ಧರಿಸಲಿದ್ದೇವೆ ಎನ್ನುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಅದಕ್ಕೆ ಬದ್ಧರಿದ್ದೇವೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸುಳ್ಳು, ಆರ್.ಎಸ್.ಎಸ್, ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡುವ ರೀತಿ ಚರ್ಚೆ ಆಗಿಲ್ಲ, ಆರೋಪ ಮಾಡುವುದೇ ಕಾಂಗ್ರೆಸ್ನವರ ಕೆಲಸ, ಇದರಲ್ಲಿ ಸತ್ಯವಿಲ್ಲ ಎಂದರು.
ಒಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದ್ದು, ಆಡಳಿತ ಸಮಿತಿ ನೇಮಕವಾಗಲಿದೆಯೋ, ಆಡಳಿತಾಧಿಕಾರಿ ನೇಮಕಗೊಳ್ಳುವರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.