ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಮಹಾನಗರದಲ್ಲಿ ಕೇಳಿಬಂದಿದೆ.
ಶಂಕರಮಠ ವಾರ್ಡ್ನ ನಿವಾಸಿ 75 ವರ್ಷದ ವೃದ್ದೆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಕುಟುಂಬದವರು ಅವರನ್ನ ಕಾರಿನಲ್ಲಿ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಪೋರ್ಟಿಸ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪೋರ್ಟಿಸ್ ಆಸ್ಪತ್ರೆ ಸಿಬ್ಬಂದಿ ವೃದ್ದೆ ಮಹಿಳೆಯನ್ನ ಕಾರಿನಲ್ಲಿ ತಪಾಸಣೆ ಮಾಡಿ ಆಸ್ಪತ್ರೆ ಒಳಗೆ ದಾಖಲೆ ಮಾಡಿಕೊಳ್ಳಲು ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯ ಎಂ. ಶಿವರಾಜು, ತಕ್ಷಣ ಪುಣ್ಯ ಆಸ್ಪತ್ರೆಗೆ ಕರೆದುಕೊಂಡು ಹೊಗುವುದಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ತೀವ್ರ ಹೃದಯಾಘಾತದಿಂದ ವೃದ್ಧೆ ಅಸುನೀಗಿದ್ದಾರೆ.
ಇನ್ನು ವೃದ್ಧೆ ಸಾವಿಗೆ ಪೋರ್ಟಿಸ್ ಆಸ್ಪತ್ರೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಪೋರೇಟರ್, ನಾನ್ ಕೊವಿಡ್ ರೋಗಿಯನ್ನ ಪೋರ್ಟಿಸ್ ಆಸ್ಪತ್ರೆ ವೈದ್ಯರು ತಪಾಸಣೆ ಮಾಡಿದಾಗ ಆಮ್ಲಜನಕ ಕೊರತೆ ಇರುವುದು ಗೊತ್ತಾಗಿತ್ತು. ಆಗ ದಾಖಲು ಮಾಡಿಕೊಂಡು ಆಕ್ಸಿಜನ್ ಕೊಡಬಹುದಾಗಿತ್ತು. ಆದ್ರೆ ಸಿಬ್ಬಂದಿ ವಿಳಂಬ ಮಾಡಿದ್ರು ಎಂದು ದೂರಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಖಾಸಗಿ ಆಸ್ಪತ್ರೆಯವರು ನಾನ್ ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸದ್ಯ ನಾನ್ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಯಾವುದೇ ಆಸ್ಪತ್ರೆ ವಿಳಂಬ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತರು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಅದೇಶ ನೀಡಬೇಕು ಎಂದು ಪಾಲಿಕೆ ಸದಸ್ಯ ಎಂ. ಶಿವರಾಜು ಮನವಿ ಮಾಡಿದ್ದಾರೆ.