ಬೆಂಗಳೂರು: ಜನವರಿ 31ಕ್ಕೆ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜ. 31ರಂದು ಸಿಎಂ ಯಡಿಯೂರಪ್ಪ ಪೋಲಿಯೋ ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ಕೋವಿಡ್-19 ಹಿನ್ನೆಲೆ ರಾಷ್ಟ್ರೀಯ ಲಸಿಕಾ ದಿನವನ್ನು ಸುರಕ್ಷಿತವಾಗಿ ನಡೆಸಲಾಗುವುದು. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಪೋಲಿಯೋ ಲಸಿಕೆ ಬಗ್ಗೆ ಸಂಶಯ ಬೇಡ. ಇಷ್ಟು ವರ್ಷಗಳಲ್ಲಿ ಯಾರಿಗೂ ಏನೂ ಆಗಿಲ್ಲ. ಹಾಗಾಗಿ ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಹಾಕಿಸಬೇಕು. ಪೋಲಿಯೋ ಮುಕ್ತ ಕರ್ನಾಟಕ ಮಾಡುವುದು ಉದ್ದೇಶ ಎಂದರು.
64,07,930 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 32,908 ಬೂತ್ಗಳನ್ನು ನಿರ್ಮಿಸಲಾಗಿದೆ. 49,338 ತಂಡಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ. 904 ಸಂಚಾರಿ ತಂಡ ಇದ್ದು, 1,934 ಟ್ರಾನ್ಸಿಟ್ ತಂಡ ರಚಿಸಲಾಗಿದೆ. 1,10,179 ಲಸಿಕಾ ಕಾರ್ಯಕರ್ತರು ಇದ್ದು, 6,645 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ವದಂತಿಗೆ ಹೆದರಿ ಹಿಂಜರಿಕೆ:
ವದಂತಿಗಳಿಗೆ ಹೆದರಿ ಕೆಲ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಲಸಿಕೆ ವರದಾನವಾಗಿ ಸಿಕ್ಕಿದೆ. ಯಾವುದೇ ಭಯ ಬೇಡ. ಕೊರೊನಾ ವಾರಿಯರ್ಸ್ಗೆ ಮೊದಲ ಆದ್ಯತೆ ನೀಡಲಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರೇ ಮುಂದೆ ಬರಬೇಕು. ಇದು ಸುರಕ್ಷಿತವಾದ ಲಸಿಕೆಯಾಗಿದೆ. ಲಸಿಕೆ ಇದ್ದು ತೆಗೆದುಕೊಂಡಿಲ್ಲವಾದರೆ ಇದಕ್ಕೆ ಯಾರು ಹೊಣೆ?. ಲಸಿಕೆ ಎಂಬ ರಾಮಬಾಣವನ್ನು ಉಪಯೋಗಿಸದೇ ಹೋದರೆ ತಮಗೆ ತಾವೇ ಹೊಣೆಗಾರರಾಗುತ್ತೇವೆ ಎಂದರು.
ಇನ್ನು ಲಸಿಕೆ ಪಡೆದು ಯಾವುದೇ ಸಾವು ಆಗಿಲ್ಲ. ತಪ್ಪು ಮಾಹಿತಿ ಹೋಗುವುದು ಬೇಡ. ಇದರಲ್ಲಿ ಯಾವುದೇ ದೊಡ್ಡ ಅಡ್ಡ ಪರಿಣಾಮ ಇಲ್ಲ. ಕೋವಿಡ್ ಲಸಿಕೆಯನ್ನ 2,95,344 ಜನರಿಗೆ ಹಾಕಲಾಗಿದೆ. 546 ಕೋವಿಡ್ ಸೆಷನ್ಸ್ ಮೂಲಕ ಲಸಿಕೆ ಹಾಕಲಾಗಿದೆ. ಒಟ್ಟು ಶೇ. 49 ರಷ್ಟು ಕೋವಿಡ್ ಲಸಿಕೆ ಗುರಿ ತಲುಪಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು 500-1000 ರಾಯಭಾರಿಗಳನ್ನು ಆಯ್ಕೆ ಮಾಡಲು ಅವಕಾಶ ಕೊಡಲು ಪಿಎಂ ಕಚೇರಿಗೆ ಮನವಿ ಮಾಡಿದ್ದೇವೆ. ಪ್ರಧಾನಿ ಕಚೇರಿಯಿಂದ ಎರಡು ಮೂರು ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.