ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿರುವ ಯಶವಂಪತಪುರದ ತಾಜ್ ವಿವಾಂತಾ ಹೋಟೆಲ್ಗೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಒಳಗೆ 30-40 ಶಾಸಕರಿದ್ದಾರೆ ಎನ್ನಲಾಗುತ್ತಿದೆ.
ಹೆಚ್ಚಿನ ಶಾಸಕರು ಹೋಟೆಲ್ನಿಂದ ಹೊರಗೇ ಇದ್ದಾರೆ. ಇದುವರೆಗೂ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾವೊಬ್ಬ ನಾಯಕರೂ ಇತ್ತ ಸುಳಿದಿಲ್ಲ. ಎಲ್ಲರೂ ಮಧ್ಯಾಹ್ನದ ವೇಳೆಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಅತೃಪ್ತರ ಮನವೊಲಿಕೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಹೋಟೆಲ್ನತ್ತ ಯಾರೂ ಬಂದಿಲ್ಲ ಎಂದು ಹೇಳಲಾಗ್ತಿದೆ.
ತಾಜ್ ವಿವಾಂತಾ ಹೋಟೆಲ್ನಲ್ಲಿ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮಾತನಾಡಿ, ನಾನು ತಾಜ್ ಹೋಟೆಲ್ಗೆ ಸ್ನೇಹಿತರನ್ನು ಮಾತಾಡಿಸಲು ಬಂದಿದ್ದೆ. ಆದರೆ, ಯಾರನ್ನೂ ಮಾತಾಡಿಸಲು ಆಗಲಿಲ್ಲ. ರಾಜ್ಯದಲ್ಲಿ ಏನಾಗ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಇಟ್ ಈಸ್ ಎ ಓಪನ್ ಸೀಕ್ರೆಟ್. ಮುಂಬೈನಲ್ಲಿರುವ ಶಾಸಕರು ವಾಪಸ್ ಬಂದರೂ ಬರಬಹುದು. ಬರದೆಯೂ ಇರಬಹುದು ಎಂದು ಹೇಳಿದರು.
ರಾಜೀನಾಮೆ ಕೊಡಲ್ಲ: ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ನಿಂದ 6 ಬಾರಿ ಶಾಸಕನಾಗಿದ್ದೇನೆ. ಪಕ್ಷ ಒಂಭತ್ತು ಬಾರಿ ಟಿಕೆಟ್ ಕೊಟ್ಟಿದೆ. ಪಕ್ಷದಿಂದ ಏನೂ ಮೋಸ ಆಗಿಲ್ಲ. ಏನಾದ್ರೂ ಕೂಡ ಪಕ್ಷದಲ್ಲೇ ಇರುತ್ತೇನೆ. ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.