ಬೆಂಗಳೂರು: ಎವಿಬಿಪಿ ಸಂಘಟನೆ ಜೊತೆ ಸೇರಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿವಿ ಆವರಣದ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ (ಜ್ಞಾನ ಭಾರತಿ) ನಡೆದ ಪ್ರತಿಭಟನೆಯಲ್ಲಿ ಮುಖ್ಯವಾಗಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿವಿಯ ವಿಳಂಬ ಧೋರಣೆ ಮತ್ತು ದ್ವಂದ್ವ ನಿಲುವು ಕುರಿತು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಮೌಲ್ಯಮಾಪನ ಆಗಿ ಸುಮಾರು ದಿನಗಳು ಕಳೆದರೂ ಇನ್ನೂ M.COM, MCA, B.Sc, M.Sc MA, B.Ed, MBA ಹಾಗೂ ಇತರ ವಿಭಾಗಗಳ ಫಲಿತಾಂಶ ಪ್ರಕಟವಾಗಿಲ್ಲ.
ಹೀಗಾಗಿ ಈ ಕೂಡಲೇ ರಿಸಲ್ಟ್ ಪ್ರಕಟವಾಗಬೇಕು. ಬಿ.ಎಡ್ ಪದವಿಯ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣಪತ್ರ ನೀಡಬೇಕು. ಸ್ನಾತಕ, ಸ್ನಾತಕೋತ್ತರ ಮತ್ತು ವಿದ್ಯಾಭ್ಯಾಸ ಮುಗಿಸಿರುವ ಹಿರಿಯ ವಿದ್ಯಾರ್ಥಿಗಳಿಗೆ ಅವರ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರವನ್ನು ನೀಡಬೇಕು. ಕೋವಿಡ್-19 ಕಾರಣದಿಂದಾಗಿ ಪರೀಕ್ಷೆಯನ್ನು ಬರೆಯಲಿಕ್ಕೆ ಆಗದ ವಿದ್ಯಾರ್ಥಿಗಳಿಗೆ ಒಂದು ಬಾರಿ ನಿರ್ಗಮನ ಯೋಜನೆ (one time exit scheme) ಪರೀಕ್ಷೆ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪರೀಕ್ಷಾ ಶುಲ್ಕದಲ್ಲಿ ಹೆಚ್ಚಳ: ಕೋವಿಡ್ ಕಾರಣದಿಂದಾಗಿ 2020- 2021ನ ಸಾಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ, ಆದರೂ ಪರೀಕ್ಷಾ ಶುಲ್ಕವನ್ನು ವಿಶ್ವವಿದ್ಯಾಲಯವು ಸಂಗ್ರಹಿಸಿದೆ. ಇದು ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಈ ವರ್ಷ ಪರೀಕ್ಷಾ ಶುಲ್ಕ ಸಂಗ್ರಹಿಸಿದ್ದಲ್ಲದೇ ಅದನ್ನು ಹೆಚ್ಚು ಮಾಡಿದ್ದಾರೆ. ಇದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚು ಮಾಡಿರುವುದು ಅತ್ಯಂತ ಖಂಡನೀಯ. ಹಿಂದಿನ ವರ್ಷ ಸಂಗ್ರಹಿಸಿದ ಪರೀಕ್ಷಾ ಶುಲ್ಕವನ್ನು ಈ ವರ್ಷ ಪರೀಕ್ಷೆಗೆ ಹೊಂದಾಣಿಕೆ ಮಾಡಿ ಈ ವರ್ಷದ ಪರೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಸ್ಟೆಲ್ಗಳ ವಾಸ ದೇವರಿಗೆ ಪ್ರೀತಿ: ಹಾಸ್ಟೆಲ್ಗಳ ಅಸಮರ್ಪಕ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ದನಗಳಂತೆ ತುಂಬಿಸಲಾಗುತ್ತಿದೆ ಎಂದು ಆರೋಪಿಸಿರುವ ಎವಿಬಿಪಿ ಕಾರ್ಯಕರ್ತರು, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ಕಿಡಿಕಾರಿದ್ದಾರೆ. ಒಂದು ಕೊಠಡಿಯಲ್ಲಿ ಕನಿಷ್ಠ 30 ರಿಂದ 35 ವಿದ್ಯಾರ್ಥಿಗಳು ಮತ್ತು 2-3 ಆಕ್ಯುಪೆನ್ಸಿ ಕೊಠಡಿಗಳಲ್ಲಿ 6-7 ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ. ಪ್ರತಿ ವರ್ಷ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ಸೌಲಭ್ಯ ಕಲ್ಪಿಸಿಸುವಂತೆ ಒತ್ತಾಯಿಸಿದ್ದಾರೆ.