ಬೆಂಗಳೂರು: ಸ್ವಾತಂತ್ರ್ಯೊತ್ಸವ ಹಿನ್ನೆಲೆಯಲ್ಲಿ ಈಗ ಚಾಮರಾಜಪೇಟೆ ಮೈದಾನ ಹಾಟ್ ಸ್ಪಾಟ್ ಎನಿಸಿದೆ. ಕಂದಾಯ ಇಲಾಖೆಯ ಸುಪರ್ದಿಗೆ ಬಂದ ಬಳಿಕ ಮೈದಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಪ್ರತಿ ಬಾರಿ ಮಾಣಿಕ್ ಶಾ ಪರೇಡ್ ಗ್ರೌಂಡ್‌ಗೆ ಹೆಚ್ಚಿನ ಭದ್ರತೆ ನೀಡಲಾಗುತಿತ್ತು. ಆದರೆ ಈ ಬಾರಿ ಚಾಮರಾಜಪೇಟೆ ಮೈದಾನಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಇಂದು ಮೊದಲ ಹಂತ ಎಂಬಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯಿಂದ ರೂಟ್ ಮಾರ್ಚ್ ನಡೆಯಿತು. ಆಗಸ್ಟ್ 15 ರಂದು ಹೆಚ್ಚಿನ ಭದ್ರತೆ ಬೇಕಿದ್ದು ರ್ಯಾಪಿಡ್ ಆಕ್ಷನ್ ಫೋರ್ಸ್ಗೂ ಕೂಡ ರಾಜ್ಯ ಪೊಲೀಸ್ ಇಲಾಖೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಲಿದೆ. ಇದೇ ಆಗಸ್ಟ್ 13 ರಂದು ಅರೆಸೇನಾಪಡೆ ನಗರಕ್ಕೆ ಆಗಮಿಸಲಿದ್ದು ಸ್ವಾತಂತ್ರ್ಯೋತ್ಸವದ ಭದ್ರತೆಗೆ ನಿಯೋಜನೆಗೊಳ್ಳಲಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, "ಈಗಾಗಲೇ ಪಥಸಂಚಲನ ಆರಂಭಿಸಲಾಗಿದೆ. ನಾಲ್ಕು ಕೆಎಸ್ಆರ್ಪಿಯ ಸಿಬ್ಬಂದಿ, ಸಿಎಆರ್ ಸಿಬ್ಬಂದಿ ಹಾಗೂ ಪೊಲೀಸರು ಭಾಗಿಯಾಗಿದ್ದಾರೆ. ಸುಮಾರು 600ಕ್ಕೂ ಅಧಿಕ ಪೊಲೀಸರು ಪಥಸಂಚಲನ ಮಾಡುತ್ತಿದ್ದಾರೆ. ಯಾವುದೇ ಗಲಾಟೆ ಇಲ್ಲದ ರೀತಿಯಲ್ಲಿ ಧ್ವಜಾರೋಹಣ ಮಾಡಬೇಕು. ಕಾರ್ಯಕ್ರಮಕ್ಕೆ ಆಹ್ವಾನ ಇದ್ದವರಿಗೆ ಮಾತ್ರ ಅವಕಾಶವಿರಲಿದೆ" ಎಂದರು.
ಇದನ್ನೂ ಓದಿ : ಹೂಮಳೆ ಸುರಿಸಿ ಬೀಳ್ಕೊಡುಗೆ: ಸಿಬ್ಬಂದಿಯ ಪ್ರೀತಿಗೆ ಭಾವುಕರಾದ ಚಿಕ್ಕಮಗಳೂರು ಎಸ್ಪಿ