ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ರಾಜಭವನದ ಮುಂಭಾಗ ಇಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೆಪಿಸಿಸಿ ಕಚೇರಿ ಮುಂಭಾಗ ತಡೆಯಲು ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ.
ಕಾಂಗ್ರೆಸ್ ನಾಯಕರು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದಲೇ ತೆರಳದಂತೆ ತಡೆದು ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ನಡೆಸಿರುವ ಮಾಹಿತಿ ಇದ್ದು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕೆಪಿಸಿಸಿ ಕಚೇರಿ ಮುಂಭಾಗ ಕರೆಸಿಕೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಪಕ್ಷದ ಮುಖಂಡರು ಕಚೇರಿಯಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಕಲೆಹಾಕಿದ್ದಾರೆ.
![Policce department plan to stop congress protest](https://etvbharatimages.akamaized.net/etvbharat/prod-images/kn-bng-01-congress-protest-control-script-7208077_27072020123341_2707f_00743_705.jpg)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ನಾಯಕರು ಒಟ್ಟಾಗಿ ರಾಜಭವನದತ್ತ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುನ್ನ ಕೆಪಿಸಿಸಿ ಕಚೇರಿ ಮುಂಭಾಗವೇ ಅವರನ್ನು ತಡೆಯುವ ಪ್ರಯತ್ನವನ್ನು ಪೊಲೀಸರು ಮಾಡಲಿದ್ದಾರೆ. ಇದಕ್ಕೆ ಅಗತ್ಯ ಸಿಬ್ಬಂದಿಯನ್ನು ಈಗಾಗಲೇ ಕರೆಸಿಕೊಂಡಿದ್ದಾರೆ. ಅಗತ್ಯವೆನಿಸಿದರೆ ಇನ್ನಷ್ಟು ಮಂದಿಯನ್ನು ಕರೆಸಿಕೊಳ್ಳುವ ಸಮಾಲೋಚನೆ ನಡೆಯುತ್ತಿದೆ ಎನ್ನಲಾಗಿದೆ.
![Policce department plan to stop congress protest](https://etvbharatimages.akamaized.net/etvbharat/prod-images/kn-bng-01-congress-protest-control-script-7208077_27072020123335_2707f_00743_105.jpg)
ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಯಾಗಿರುವ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನೀಡದಿರುವ ಸಾಧ್ಯತೆಯನ್ನು ಮನಗಂಡಿರುವ ಕಾಂಗ್ರೆಸ್ ನಾಯಕರು, ಮಧ್ಯಾಹ್ನ ನಡೆಸುವ ಸುದ್ದಿಗೋಷ್ಠಿ ಸಂದರ್ಭವೇ ತಮ್ಮ ಹೋರಾಟದ ವಿವರವನ್ನು ನೀಡುವ ಸಾಧ್ಯತೆ ಇದೆ. ಪೊಲೀಸರು ಪ್ರತಿಭಟನೆಗೆ ತೆರಳಲು ಅವಕಾಶ ನಿರಾಕರಿಸುತ್ತಿರುವ ಸಾಧ್ಯತೆ ಇರುವ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟು ಬೇರೆ ರೀತಿಯ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೂ ಇದೆ.