ಬೆಂಗಳೂರು: ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘದ ಸೈಟ್ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ ಹಾಗೂ ವಂಚನೆ ನಡೆದಿರುವ ಶಂಕೆ ವ್ಯಕ್ತಪಡಿಸಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಸಂಘದ ಸದಸ್ಯರು ಪತ್ರ ಬರೆದಿದ್ದಾರೆ. ಸಂಘದ ಅಧ್ಯಕ್ಷ ಐಪಿಎಸ್ ಅಧಿಕಾರಿ ಎ.ಎನ್. ಪ್ರಕಾಶ್ ಗೌಡ ಎನ್ನುವವರ ವಿರುದ್ಧ ಪತ್ರ ಬರೆದಿದ್ದು, ಕೂಡಲೇ ಮಧ್ಯಪ್ರವೇಶಿಸಿ ವಂಚನೆಗೊಳಗಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಉಲ್ಲೇಖಿಸಿದ್ದಾರೆ.
2014ರಲ್ಲಿ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೈಟ್‌ಗಳನ್ನು ಅಭಿವೃದ್ಧಿಪಡಿಸಿ, ಸದಸ್ಯರಿಗೆ ಜೇಷ್ಠತೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. 1,500 ರೂ. ಪಾವತಿ ಮಾಡಿ, ಸದಸ್ಯತ್ವ ಶುಲ್ಕ ನೀಡಲಾಗಿತ್ತು. ನೆಲಮಂಗಲದ ಮಲ್ಲರ ಬಾಣವಾಡಿ ಗ್ರಾಮದಲ್ಲಿ ಜಮೀನು ಖರೀದಿಸಲಾಗಿತ್ತು. ಚದರಡಿಗೆ 666 ರೂ. ಪಾವತಿ ಮಾಡಿದರೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
2016ರಲ್ಲಿ ಪೂರ್ಣ ಹಣ ಪಾವತಿ ಮಾಡಿದರೆ, ಮೊದಲು ಜೇಷ್ಠತೆ ಆಧಾರದ ನಿವೃತ್ತಿ ಅಂಚಿಗೆ ಬಂದಿದ್ದವರಿಗೆ ಮೊದಲು ಸೈಟ್ ಕೊಡುವುದಾಗಿ ಹೇಳಿದಾಗ ಸಾವಿರಾರು ಪೊಲೀಸರು ಹಣ ಹೂಡಿಕೆ ಮಾಡಿದ್ದರು. 2019-20ರ ವಾರ್ಷಿಕ ಸಭೆಯಲ್ಲಿ ಕೇವಲ 200 ಸದಸ್ಯರಿಗೆ ತಾತ್ಕಾಲಿಕ ಹಂಚಿಕೆ ಪತ್ರ ನೀಡಿದ್ದರು. ಬಳಿಕ ಇಲ್ಲಿಯವರೆಗೂ ಸೈಟ್ ಹಂಚಿಕೆಯಾಗಿಲ್ಲ. ಒಂದಲ್ಲ ಒಂದು ಕಾರಣ ಹೇಳಿ ಮುಂದೂಡುತ್ತಿದ್ದಾರೆ. 2020-21ನೇ ಸಾಲಿನ ವಾರ್ಷಿಕ ಸಭೆಯಲ್ಲಿ 1 ಸಾವಿರ ಸದಸ್ಯರಿಗೆ ಸೈಟ್ ಹಂಚಿಕೆ ಮಾಡುವುದಾಗಿ ಅಧ್ಯಕ್ಷರು ಹೇಳಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.
ಈವರೆಗೂ ನೋಂದಣಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕೇಳಲು ಹೋದರೆ ಕಾಯಲು ಆಗದಿದ್ದಲ್ಲಿ ನೀವು ಕಟ್ಟಿರುವ ಹಣವನ್ನು ವಾಪಸ್ ದಲ್ಲಿ ಪಡೆದುಕೊಂಡು ಹೋಗಿ ಎಂದು ಬೇಜವಾಬ್ದಾರಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ನೊಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ರದಲ್ಲಿ ಆರೋಪಿಸಿದ್ದಾರೆ.
ರಾಜಧಾನಿಯಲ್ಲಿ ಸೈಟ್ ಹೊಂದುವ ಸಲುವಾಗಿ ಪೊಲೀಸ್ ಇಲಾಖೆಯಲ್ಲಿ ಹಗಲುರಾತ್ರಿ ಕರ್ತವ್ಯ ನಿರ್ವಹಿಸಿ ಸಂಪಾದನೆ ಮಾಡಿ, ಸಾಲ ಮಾಡಿ ಲಕ್ಷಾಂತರ ರೂ.ಗಳನ್ನು ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಪಾವತಿ ಮಾಡಿದ್ದೇವೆ. ಕೆಲವರು ನಿವೃತ್ತಿ ಹೊಂದಿದ್ದಾರೆ. ಇನ್ನೂ ಹಲವಾರು ನಿವೃತ್ತಿ ಅಂಚಿಗೆ ಬಂದಿದ್ದಾರೆ. ಮೃತಪಟ್ಟಿರುವ ಸದಸ್ಯರೂ ಇದ್ದಾರೆ. ಸ್ವಂತ ನಿವೇಶನದಲ್ಲಿ ಮನೆ ಕಟ್ಟಬೇಕೆಂಬ ಆಸೆ ಕಮರಿ ಹೋಗಿದೆ, ನೆಮ್ಮದಿ ಇಲ್ಲದಾಗಿದೆ. ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಡಿಜಿಪಿಗೆ ನೊಂದ ಸದಸ್ಯರು ಮನವಿ ಮಾಡಿದ್ದೇವೆ ಎಂದು ಕೆಲ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಲಾಭ ಮಾಡುವ ಆಸೆಯಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿದ್ದಾರೆ. ತಾಂತ್ರಿಕ ಕಾರಣಕ್ಕೆ ಜಮೀನು ಸಂಘದ ಹೆಸರಿಗೆ ಆಗುತ್ತಿಲ್ಲ. ಹಣವೂ ಕೈ ಸೇರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ನೇರ ಆರೋಪವನ್ನು ಕೆಲ ಸದಸ್ಯರು ಹೊರಿಸಿದ್ದಾರೆ.
ಇದನ್ನೂ ಓದಿ: Delta Plus: ವೈರಸ್ ಪತ್ತೆಗೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಿದ್ಧವಾಯ್ತು ಮೊಬೈಲ್ ಟೆಸ್ಟ್ ಲ್ಯಾಬ್