ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 10 ರಾಜ್ಯಗಳ ಒಟ್ಟು 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಮೋದಿಯವರ ವಿಡಿಯೋ ಕಾನ್ಫರೆನ್ಸ್ ಉಪಯುಕ್ತವಾಗಿತ್ತು. ಅವರ ಉದ್ದೇಶ ಬೇರೆ ರಾಜ್ಯಗಳಲ್ಲಿ ವಿನೂತನವಾಗಿ ತೆಗೆದುಕೊಂಡಿರೋ ಕ್ರಮ ಏನು?. ಯಶಸ್ವಿ ಪ್ರಯೋಗ ಏನು, ಅದನ್ನು ಎಲ್ಲರೂ ಅಳವಡಿಸಿಕೊಳ್ಳಬಹುದಾ ಎಂಬ ಚರ್ಚೆ ಮಾಡಿದರು ಎಂದು ಗೃಹ ಸಚಿವರು ಸಭೆಯ ಬಗ್ಗೆ ವಿವರಿಸಿದರು.
ರಾಜ್ಯದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಡಿಸಿಎಂ, ಬಿಬಿಎಂಪಿ ಮುಖ್ಯ ಆಯುಕ್ತರು ವಿವರಿಸಿದ್ದಾರೆ. ಟ್ರಯಾಜ್ ಸೆಂಟರ್ ಲಭ್ಯತೆ ಬಗ್ಗೆ ಬೇರೆ ಬೇರೆ ರಾಜ್ಯದಲ್ಲಿ ಏನು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.
ಗ್ರಾಮೀಣ ಮತ್ತು ಸೆಮಿ ಅರ್ಬನ್ ಪ್ರದೇಶಗಳಲ್ಲಿ ಕೊರೊನಾ ಹರಡುತ್ತಿದ್ದು, ವ್ಯಾಪಕತೆ ಜಾಸ್ತಿ ಇದೆ. ಸೋಂಕು ನಿಯಂತ್ರಿಸಲು ಜನರ ತೊಡಗಿಸಿಕೊಳ್ಳುವ ಕೆಲಸ ಆಗಬೇಕು.
ಮೈಕ್ರೋ ಕಂಟೇನ್ಮೆಂಟ್ ಯಶಸ್ವಿಯಾಗಿ ಮಾಡಬೇಕು. ಇದರಿಂದ ಸೋಂಕು ಹರೋಡೋದು ತಪ್ಪಿಸಬಹುದು ಎಂದು ಪ್ರಧಾನಿಗೆ ತಿಳಿಸಿದ್ದಾರೆ ಎಂದರು.
ಗ್ರಾಮಗಳಲ್ಲಿ ಎಲ್ಲರೂ ಅಂಗಡಿಗಳಿಗೆ ಹೋಗುವ ಬದಲು, ಕೆಲವರೇ ಹೋಗಿ ಖರೀದಿ ಮಾಡುವುದು ಸೂಕ್ತ. ಆರೋಗ್ಯ ಸೌಕರ್ಯಕ್ಕೆ ಒತ್ತು ನೀಡಬೇಕು. ಮಧ್ಯಪ್ರದೇಶದ ಗ್ರಾಮ ಪಂಚಾಯತ್ಗಳಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಉತ್ತಮ ಕೆಲಸ ಆಗಿದೆ.
ಮಕ್ಕಳಲ್ಲಿ ಮನೋಬಲ ತುಂಬಿಸಲು, ಕಾರ್ಟೂನ್, ಹಾಡು, ಸ್ಥಳೀಯ ಭಾಷೆಯಲ್ಲಿ ಜಾಗೃತಿ ಮೂಡಿಸಬೇಕು. ಲಸಿಕೆ ಉಳಿತಾಯ ಮಾಡುವ ಬಗ್ಗೆ ಕೂಡ ತಿಳಿಸಿದ್ದಾರೆ. ಡಿಸಿಗಳು ಫೀಲ್ಡ್ ಕಮಾಂಡರ್ ಆಗಿ ಕೆಲಸ ಮಾಡುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಲಾಕ್‌ಡೌನ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದಾರೆ. ಸಿಎಂ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಪಿಎಂ ವ್ಯಾಕ್ಸಿನ್ ಪೂರೈಕೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ- ಗೌರವ್ ಗುಪ್ತ
ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪ್ರಧಾನಿ ಜೊತೆಗೆ ಕೊರೊನಾ ನಿಯಂತ್ರಿಸುವ ಕುರಿತಂತೆ ಚರ್ಚೆಯಾಗಿದೆ.
ಕೋವಿಡ್ ಕಂಟ್ರೋಲ್ ವ್ಯವಸ್ಥೆ ಬಗ್ಗೆ ತಿಳಿಸಲಾಗಿದೆ. ಆಮ್ಲಜನಕ ಹಾಗೂ ಲಸಿಕೆ ಇನ್ನಷ್ಟು ಅಗತ್ಯ ಇರುವ ಬಗ್ಗೆ ಅವರ ಗಮನಕ್ಕೆ ತರಲಾಗಿದೆ ಎಂದರು.
ಜಿಲ್ಲಾಮಟ್ಟದಲ್ಲಿ ಕೈಗೊಂಡಿರೋ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ. ಟ್ರಯಾಜ್ ಸೆಂಟರ್, ಡೇಟಾ ಮ್ಯಾನೇಜ್ಮೆಂಟ್ ವ್ಯವಸ್ಥೆ, ಹೋಂ ಐಸೋಲೇಷನ್, ಸಿಸಿಸಿ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರಕ್ಕೆ ವ್ಯಾಕ್ಸಿನ್ ನೀಡುವ ವಿಚಾರವಾಗಿ, ಪೂರೈಕೆ ಹೆಚ್ಚಳ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಇನ್ನು, ಲಾಕ್‌ಡೌನ್ ವಿಸ್ತರಣೆ ವಿಚಾರ ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದರು.
ವ್ಯಾಕ್ಸಿನ್ ಸಮರ್ಪಕವಾಗಿ ಬಳಸಿಕೊಳ್ಳಲು ಸೂಚನೆ
ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ವ್ಯಾಕ್ಸಿನ್ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರಧಾನಿಗಳು ಸೂಚನೆ ನೀಡಿದ್ದಾರೆ. ಗ್ರಾಮೀಣ ಭಾಗಕ್ಕೆ ಹರಡದಂತೆ ಜಾಗೃತಿ ಮೂಡಿಸುವ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದಾರೆ.
ಸಭೆಯಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚೆನ್ನೈನಲ್ಲಿ ಕಾರ್ ಆ್ಯಂಬುಲೆನ್ಸ್ ಮಾಡಿದ್ದಾರೆ. ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯ್ತು.
ಮೋದಿ ಅವರ ಸಭೆಯಲ್ಲಿ ಕೊರೊನಾ ಕಂಟ್ರೋಲ್ಗೆ ಕೈಗೊಂಡಿರುವ ಹೊಸ ಹೊಸ ಆವಿಷ್ಕಾರಗಳ ಪರಿಚಯ ಹಂಚಿಕೊಳ್ಳಲಾಯ್ತು ಎಂದರು.