ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಪ್ರಮುಖ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದರು. ಪ್ರಧಾನಿ ಸ್ವಾಗತಕ್ಕೆ ತೆರಳುವ ಮೊದಲು ಕೆಲಕಾಲ ಚರ್ಚೆ ನಡೆಸಿದರು. ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿದರು.
ಮೋದಿ ಕಾರ್ಯಕ್ರಮ ನಡೆಯಲಿರುವ ಕೊಮ್ಮಘಟ್ಟ ಯಶವಂತ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಸ್ಥಳೀಯ ಶಾಸಕರಾಗಿ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಸೋಮಶೇಖರ್ ವೇದಿಕೆ ಕಾರ್ಯಕ್ರಮದ ಅಂತಿಮ ಸಿದ್ಧತೆ ಕುರಿತು ಸಿಎಂಗೆ ವರದಿ ಸಲ್ಲಿಸಿದರು. ಮಳೆ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿದ್ಧತೆಗೆ ವಿಳಂಬವಾದ್ದರಿಂದ ಇಂದು ವರದಿ ನೀಡಿ ಕಾರ್ಯಕ್ರಮಕ್ಕೆ ಸ್ಥಳ ಸನ್ನದ್ಧವಾಗಿದೆ ಎನ್ನುವ ಮಾಹಿತಿ ನೀಡಿದರು.
ನಂತರ ಸಿಎಂ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕಂದಾಯ ಸಚಿವ ಆರ್ ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು. ಕಾರ್ಯಕ್ರಮದ ಸಿದ್ಧತೆ, ಭದ್ರತೆ ಕುರಿತು ಮಾತುಕತೆ ನಡೆಸಿದರು. ಸಚಿವರ ಜೊತೆ ಅನೌಪಚಾರಿಕ ಸಭೆ ನಡೆಸಿದ ನಂತರ ಪ್ರಧಾನಿ ಮೋದಿಯನ್ನ ಸ್ವಾಗತ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಯಲಹಂಕ ವಾಯುನೆಲೆಗೆ ತೆರಳಿದರು.
(ಓದಿ:ಮೋದಿ ಆಗಮನ ಹಿನ್ನೆಲೆ ಬೆಂಗಳೂರು ರಸ್ತೆ ಸಂಚಾರದಲ್ಲಿ ಬದಲಾವಣೆ: ಪರ್ಯಾಯ ಮಾರ್ಗ ಎಲ್ಲೆಲ್ಲಿ?)