ಬೆಂಗಳೂರು: ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.
ಮಂಗಳವಾರ(ಇಂದು) ಸಂಜೆ 4:30ಕ್ಕೆ ಸಿಎಂಗೆ ಕರೆ ಮಾಡಿ ಸುಮಾರು ಐದು ನಿಮಿಷಗಳ ಕಾಲ ಪ್ರಧಾನಿ ಮಾತನಾಡಿದ್ದಾರೆ. ಈ ವೇಳೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕೋವಿಡ್ ತಗುಲಿರುವ ಬಗ್ಗೆ ಸಿಎಂ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀವು ಮತ್ತು ಕುಟುಂಬ ಸದಸ್ಯರೆಲ್ಲರೂ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ನಂತರ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು. ಇದೀಗ ಬೆಂಗಳೂರಿನಲ್ಲಿ ವರ್ಚುವಲ್ ಆಗಿ ಸಭೆ ನಡೆಸುತ್ತಿದ್ದೇನೆ. ಜನವರಿ 13ರಂದು ಸಂಜೆ ತಾವು ಕರೆದಿರುವ ಕೋವಿಡ್ ವರ್ಚುವಲ್ ಸಭೆಗೆ ಪೂರ್ವಭಾವಿ ರೂಪದಲ್ಲಿ ಈ ಸಭೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯದಲ್ಲಿನ ಕೋವಿಡ್ ನಿಯಂತ್ರಣ ಕುರಿತು ವಿವರಣೆ ನೀಡಿದ್ದಾರೆ.
(ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ: ಗೃಹ ಸಚಿವರ ಸ್ಪಷ್ಟನೆ)