ಬೆಂಗಳೂರು: ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಆಡಳಿತಾಧಿಕಾರಿ ನೇಮಕ ಇಂದು ಅಥವಾ ನಾಳೆ ಆಗಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಕೆಂಪೇಗೌಡ ದಿನಾಚರಣೆ ಬಳಿಕ ಮಾತನಾಡಿದ ಅವರು, ಮುಂದಿನ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ ಬೆಂಗಳೂರಿಗೆ ಹೊಸ ಕಾಯ್ದೆ ಕೊಡುವ ಬಗ್ಗೆಯೂ ಸಿದ್ಧತೆ ಆಗುತ್ತಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ. ಈಗಾಗಲೇ ವಾರ್ಡ್ ಮರುವಿಂಗಡಣೆ ಆಗಿದೆ. ಚುನಾವಣಾ ಮತದಾರರ ಪಟ್ಟಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ವಾರ್ಡ್ ಹೆಚ್ಚಳ ಹೊಸ ಕಾಯ್ದೆಯ ಪ್ರಕಾರ ನಡೆಯಲಿದೆ. ಹೊಸ ಕಾಯ್ದೆಗಳಲ್ಲಿ ಏನೇನು ಸುಧಾರಣೆ ಮಾಡ್ಬೇಕು ಎಂಬುದರಲ್ಲಿ ಇದೂ ಸೇರಿದೆ. ಈಗಿನ ಕೆಎಂಸಿ ಕಾಯ್ದೆ ಪ್ರಕಾರ 198 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ. ಹೊಸ ಕಾಯ್ದೆ ಬಂದ ಮೇಲೆ ಆ ಪ್ರಕಾರ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿಗಳೇ ಆಡಳಿತಾಧಿಕಾರಿ ನೇಮಕ ಮಾಡಲಿದ್ದಾರೆ ಎಂದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸರ್ಕಾರ, ಎಲೆಕ್ಷನ್ ಕಮಿಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಲ್ಲ ಸೇರಿ ವ್ಯವಸ್ಥೆ ಮಾಡಿಕೊಂಡು ಅತಿ ಶೀಘ್ರದಲ್ಲಿ ಚುನಾವಣೆ ಮಾಡಲಿದೆ. ಚುನಾವಣೆ ಯಾವತ್ತು ಮಾಡಿದ್ರೂ ಬಿಜೆಪಿಗೆ ಗೆಲ್ಲುತ್ತೆ. ಸ್ಥಳೀಯ ಸಂಸ್ಥೆ ತುಂಬಾ ಅಗತ್ಯ. ಮಳೆ ಹೆಚ್ಚಾಗುತ್ತಿದೆ. ಪಾಲಿಕೆ ಸದಸ್ಯರು ಅಧಿಕಾರದಲ್ಲಿ ಇಲ್ಲದಿದ್ದರೂ, ಜನರ ಸೇವೆ ಮಾಡುತ್ತೇವೆ ಎಂದು ಭರವಸೆಯ ಮಾತನಾಡಿದರು.