ಬೆಂಗಳೂರು : ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹುಬ್ಬಳ್ಳಿಯ ಮನೋವೈದ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಘೋಷಿಸಿದ್ದು, ಮದ್ಯ ಮಾರಾಟವನ್ನೂ ನಿಲ್ಲಿಸಲಾಗಿದೆ. ಇದರಿಂದ ಮದ್ಯಪಾನಿಗಳಿಗೆ ಅಗತ್ಯ ಮದ್ಯ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಮದ್ಯ ಮಾರಾಟಕ್ಕೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹುಬ್ಬಳ್ಳಿಯ ಮನೋವೈದ್ಯ ಡಾ. ವಿನೋದ್ ಕುಲಕರ್ಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿ ವಜಾಗೊಳಿಸಿದೆ. ಅಲ್ಲದೆ ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡುವಂತೆ ಆದೇಶಿಸಿದೆ.
ಪ್ರಸ್ತುತ ಸಂದರ್ಭದಲ್ಲಿ ಆಹಾರವೂ ಸಿಗದೆ ಹಲವರು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮದ್ಯ ಕೋರಿ ಅರ್ಜಿ ಸಲ್ಲಿಸಿರುವುದು, ಅದರಲ್ಲೂ ವೈದ್ಯರಾಗಿ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
'ಪುರಾಣ ಕಾಲದಿಂದಲೂ ಮದ್ಯಪಾನಕ್ಕೆ ಅವಕಾಶವಿದೆ. ಅಲ್ಪ ಮದ್ಯಪಾನ ಕೆಲವರಿಗೆ ನೆಮ್ಮದಿ ತರಲಿದೆ. ಇನ್ನು ಮದ್ಯಪಾನ ಚಟವಿರುವವರಿಗೆ ಮದ್ಯ ನಿರಾಕರಣೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ವ್ಯಸನಿಗಳಲ್ಲಿ ನಡುಕ, ಭ್ರಮೆ, ನಿದ್ರಾಹೀನತೆ ಉಂಟಾಗಲಿದೆ. ಕೆಲವೊಮ್ಮೆ ಫಿಟ್ಸ್ನಂತಹ ಕಾಯಿಲೆ ಬರುವ ಸಾಧ್ಯತೆಯಿದೆ. ಅಲ್ಲದೆ ಮದ್ಯ ಸಿಗದಿದ್ದಾಗ ವ್ಯಸನಿಗಳು ಇತರರ ಮೇಲೆ ಹಲ್ಲೆ ಮಾಡುವುದು ಅಥವಾ ಆತ್ಮಹತ್ಯೆಗೆ ಯತ್ನಿಸಬಹುದು. ಈಗಾಗಲೇ ಮದ್ಯ ನಿರಾಕರಣೆಯಿಂದ ಮದ್ಯಪಾನಿಗಳಿಗೆ ಮಾನಸಿಕ ಖಿನ್ನತೆ ಉಂಟಾಗಿದ್ದು, ಕೆಲವೆಡೆ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಹೀಗಾಗಿ ದಿನದಲ್ಲಿ ಸ್ವಲ್ಪ ಹೊತ್ತು ಬಾರ್ ತೆರೆದು ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿತ್ತು.