ಬೆಂಗಳೂರು: ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡುವ ಸಂಬಂಧ ಕಾನೂನಾತ್ಮಕ ಅಂಶಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹತ್ವದ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್.ರಾಜು, ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಹಾಗೂ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರನ್ನು ಕರೆಯಿಸಿಕೊಂಡು ಚರ್ಚೆ ನಡೆಸಿದರು.
ನಾಳೆ ಸಂಪುಟ ರಚಣೆ ನಂತರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲು ನಿರ್ಧಾರ ಕೈಗೊಳ್ಳಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಪೊಲೀಸ್, ಗುಪ್ತಚರ ಮತ್ತು ಅಡ್ವೋಕೇಟ್ ಜನರಲ್ ಜೊತೆ ಸಿಎಂ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.