ಬೆಂಗಳೂರು: ದೀಪಾವಳಿ ಹಬ್ಬ ಅಂದರೆ ಸಂತಸ-ಸಂಭ್ರಮ ಮನೆ ಮಾಡುತ್ತದೆ. ಭಾಗಶಃ ಜನರು ರೋಡ್ನಲ್ಲಿ ಧಾಮ್ ಧೂಮ್ ಅಂತ ಪಟಾಕಿ ಹೊಡೆದು ಖುಷಿ ಪಟ್ಟರೆ, ಕೆಲವರು ಮನೆಯನ್ನೇ ದೀಪಾಲಂಕಾರಗೊಳಿಸಿ ಕಂಗೊಳಿಸುವಂತೆ ಮಾಡುತ್ತಾರೆ. ಆದರೆ, ಪಟಾಕಿ ಸಿಡಿಸಿ ಸಂಭ್ರಮಿಸಬೇಕು ಎಂದುಕೊಂಡಿದ್ದ ಜನರಿಗೆ ಸರ್ಕಾರ ಹೊರಡಿಸಿರುವ ಆದೇಶದಿಂದ ಬೇಸರ ಉಂಟಾಗಿದೆ. ಅದಲ್ಲದೆ ಪಟಾಕಿ ಮಾರಾಟಗಾರರ ಬದುಕನ್ನು ಕಂಗಾಲಾಗುವಂತೆ ಮಾಡಿದೆ. ಅದಕ್ಕೆಲ್ಲಾ ಕಾರಣ ಕೊರೊನಾ.
ದೀಪಾವಳಿ ಎಂದರೆ ಪಟಾಕಿ ಸದ್ದು ಜೋರಾಗಿಯೇ ಇರುತ್ತೆ. ಆದರೆ, ಕೊರೊನಾ ಪರಿಸ್ಥಿತಿಯಿಂದ ಶಬ್ದ ಮತ್ತು ವಾಯು ಮಾಲಿನ್ಯ ಉಂಟಾಗಿ ಕೊರೊನಾ ಉಲ್ಬಣಿಸುವ ಸಾಧ್ಯತೆ ಇದೆ. ಹೀಗಾಗಿ, ತಜ್ಞರ ವರದಿ ಆಧರಿಸಿ ಪಟಾಕಿಗೆ ನಿಷೇಧ ಹೇರಿ ರಾಜ್ಯ ಸರ್ಕಾರ ಹಸಿರು ಪಟಾಕಿಗೆ ಮಾತ್ರ ಅನುಮತಿ ನೀಡಿದೆ.
ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿರುವುದರಿಂದ ಈಗಾಗಲೇ ಖರೀದಿಸಿರುವ ಪಟಾಕಿ ಸಂಗ್ರಹವನ್ನು ಏನು ಮಾಡುವುದು ಎಂಬ ಚಿಂತೆ ವ್ಯಾಪಾರಿಗಳನ್ನು ತತ್ತರಿಸುವಂತೆ ಮಾಡಿದೆ. ಹಸಿರು ಪಟಾಕಿ ಬಳಸಿ ಸರಳ ದೀಪಾವಳಿ ಆಚರಿಸಿ ಎಂದೂ ಸಿಎಂ ಹೇಳಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮಾರಾಟಕ್ಕೆ ಸಿದ್ದಮಾಡಿಕೊಂಡಿದ್ದ ಸಂದರ್ಭದಲ್ಲಿ ನಿಷೇಧ ಎಂದರೆ ಹೇಗೆ? ನಮಗಾಗುವ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ಎಂದು ಅಳಲು ತೋಡಿಕೊಳ್ತಾರೆ ಪಟಾಕಿ ಮಾರಾಟಗಾರರು.
ರಾಜ್ಯದಲ್ಲಿ ಪಟಾಕಿ ನಿಷೇಧದ ಕ್ರಮವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗಾಗಲೇ ಸಾಮಾಜಿಕ ಜಾಲ ತಾಣದ ಮೂಲಕ ಖಂಡಿಸಿದ್ದಾರೆ. ಮೊದಲೇ ಈ ನಿರ್ಧಾರ ಮಾಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಪಟಾಕಿ ನಿಷೇಧಿಸುವ ಮೂಲಕ ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಹೊಟ್ಟೆಗೆ ಕಲ್ಲು ಹಾಕಿದಂತಾಗಿದೆ.