ಬೆಂಗಳೂರು: ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿ ನ್ಯಾಯಬೆಲೆ ಅಂಗಡಿಗೆ ಅನುಮತಿ ಪಡೆಯುವವರಿಗೆ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆ ಸಂಬಂಧ ಷರತ್ತು ವಿಧಿಸಲು ರಾಜ್ಯ ಸರ್ಕಾರ ವಿಶೇಷ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ) ಸಂಬಂಧಿಸಿದಂತೆ 2016ರಲ್ಲಿ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ಪೀಠ ಈ ಆದೇಶ ನೀಡಿದೆ.
ನ್ಯಾಯಬೆಲೆ ಅಂಗಡಿ ಪರವಾನಿಗೆ ಪಡೆದ (ಡೀಲರ್ ) 65 ವರ್ಷದೊಳಗೆ ಸಾವನ್ನಪ್ಪಿದರೆ ಅನುಕಂಪದ ಆಧಾರದ ಮೇಲೆ ಅವರ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಮಗಳಿಗೆ ಪರವಾನಿಗೆ ನೀಡುವಾಗ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು. ಹಾಗೂ 18 ರಿಂದ 40 ವರ್ಷದ ಒಳಗಿನವರಾಗಿರಬೇಕು ಎಂದು ಷರತ್ತು ವಿಧಿಸಿ ಸರ್ಕಾರ ಹೊರಡಿಸಿದ ಆದೇಶವನ್ನು ಪೀಠ ಇದೇ ವೇಳೆ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ (ನಿಯಂತ್ರಣ) ವ್ಯವಸ್ಥೆ ನಿಬಂಧನೆಗೆ ತಿದ್ದುಪಡಿ ಮಾಡಿದ ಸರ್ಕಾರ, ಅನುಮತಿ ಪಡೆದಿರುವ ಡೀಲರ್ 65 ವರ್ಷ ಮೀರುವುದರೊಳಗೆ ಸಾವನ್ನಪ್ಪಿದರೆ ಅವರ 65 ವರ್ಷ ಮೀರಿರದ ಪತ್ನಿ, 18 ವರ್ಷ ತುಂಬಿದ ನಿರುದ್ಯೋಗಿ ಪುತ್ರ ಅಥವಾ 18 ರಿಂದ 40 ವರ್ಷದೊಳಗಿನ ಅವಿವಾಹಿತ ಪುತ್ರಿ ಅಥವಾ 18 ವರ್ಷ ತುಂಬಿದ ವಿಧವೆ ಪುತ್ರಿ ಪರವಾನಿಗೆ ಪಡೆಯಬಹುದು.
ಈ ಸಂದರ್ಭದಲ್ಲಿ ಪರವಾನಿಗೆ ಹಸ್ತಾಂತರ ಕೋರುವವರು, ಡೀಲರ್ ಸಾವನ್ನಪ್ಪಿದ ದಿನಕ್ಕೆ ಅನ್ವಯಿಸುವಂತೆ 10ನೇ ತರಗತಿ ಪಾಸಾಗಿರಬೇಕು ಅಥವಾ ತತ್ಸಂಬಂಧ ಅರ್ಹತೆ ಹೊಂದಿರಬೇಕು. ನವೀಕರಣ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಈ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಸರ್ಕಾರದ ತಿದ್ದುಪಡಿ ನಿಯಮವನ್ನು ಪುರಸ್ಕರಿಸಿರುವ ಹೈಕೋರ್ಟ್ 10ನೇ ತರಗತಿ ಪಾಸಾಗಿರಬೇಕು ಎಂಬುದು ಸಮರ್ಥನೀಯ ಷರತ್ತಾಗಿದೆ. ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ವ್ಯಕ್ತಿಗೆ ಸಾಮಾನ್ಯ ಅಂಕ ಗಣಿತ, ಬ್ಯಾಂಕಿಂಗ್ ಮತ್ತು ಸಾರ್ವಜನಿಕ ಕಚೇರಿಗಳ ಜೊತೆ ವ್ಯವಹರಿಸುವುದು ತಿಳಿದಿರಬೇಕಾಗುತ್ತದೆ. ವಯಸ್ಸಿಗೆ ಸಂಬಂಧಿಸಿದ ವಿಚಾರವು ನೀತಿಯ ಭಾಗವಾಗಿದೆ. ಇದು ಸರಿಯಾಗಿದೆ. ಹೀಗಾಗಿ, 10ನೇ ತರಗತಿ ಪಾಸಾಗಿರಬೇಕು ಎಂಬ ಷರತ್ತಿನಲ್ಲಿ ತಪ್ಪು ಹುಡುಕಲಾಗದು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಸಿಎಂ ವರ್ಕ್ ಫ್ರಂ ಹೋಂ; ನಿವಾಸದಿಂದಲೇ ಆಡಳಿತ ಯಂತ್ರ ಮುನ್ನಡೆಸುತ್ತಿರುವ ಬೊಮ್ಮಾಯಿ..!