ಬೆಂಗಳೂರು: ಲಾಕ್ಡೌನ್ ನಡುವೆಯೂ ರಂಜಾನ್ ಹಬ್ಬಕ್ಕೆ ಕೋಳಿಗಳನ್ನ ವಿತರಣೆ ಮಾಡಿದ ವೇಳೆ ಜನರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋಳಿ ಹಾಗೂ ದಿನಸಿ ಕಿಟ್ ಗಳಿಗೆ ಮುಗಿಬಿದ್ದಿರುವಂತಹ ಘಟನೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕಾರ್ಯಕ್ರಮದಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಭಾಗಿಯಾಗಿದ್ದು, ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಕೋಳಿಗೆ ಜನರು ಮುಗಿಬಿದ್ದರು.
ಮಕ್ಕಳು, ವಯಸ್ಕರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು - ಪುರುಷರು ರೇಷನ್ ಹಾಗೂ ಕೋಳಿಗಾಗಿ ಕೆಲಕಾಲ ನೂಕು ನುಗ್ಗಲು ಉಂಟಾಗಿದೆ. ಇದನ್ನು ನೋಡಿದ ಸಚಿವ ಭೈರತಿ ಬಸವರಾಜ್ ಪಾಲಿಕೆ ಸದಸ್ಯ ಜಯಪ್ರಕಾಶ್ ವಿರುದ್ಧ ಗರಂ ಆದರು. ಇಷ್ಟು ದೊಡ್ಡ ಮೈದಾನದಲ್ಲಿ ಈ ರೀತಿ ಗುಡೆ ಹಾಕಿದ್ದಿಯಾ ಕನಿಷ್ಠ ಹತ್ತಕ್ಕಿಂತ ಹೆಚ್ಚು ಕೌಂಟರ್ ಗಳನ್ನು ತೆರೆಯಲು ನಿನಗೆ ಏನಾಗಿತ್ತು ಎಂದು ಕೇಳಿದರು.
ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಸಾಮಾನ್ಯ ಜನರ ಕಾರ್ಯಕ್ರಮಗಳಿಗೆ 50 ಕ್ಕೂ ಹೆಚ್ಚು ಜನರು ಸೇರಬಾರದು ಎನ್ನುವ ಪೊಲೀಸರು ಇಲ್ಲಿ ಏಕೆ ಅನುಮತಿ ನೀಡಿದರು ಎಂಬುದು ಜನಸಾಮಾನ್ಯರ ಪ್ರಶ್ನೆ ಯಾಗಿದೆ.