ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ 4ರ (ತುಮಕೂರು ರಸ್ತೆ) ಗೊರಗುಂಟೆಪಾಳ್ಯದಿಂದ ನಾಗಸಂದ್ರ ಪಾರ್ಲೆಜಿ ಫ್ಯಾಕ್ಟರಿವರೆಗೆ ಸುಮಾರು 5 ಕಿಲೋ ಮೀಟರ್ ಸಂಪರ್ಕಿಸುವ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ತಿಂಗಳಾದರೂ ಮುಗಿದಿಲ್ಲ.
ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಕುರಿತು ಅಧಿಕಾರಿಗಳಲ್ಲಿ ಗೊಂದಲವಿದೆ. ಮೇಲ್ಸೇತುವೆ ರಿಪೇರಿ ಕಾಮಗಾರಿ ಮುಗಿಸಲು ಇನ್ನೂ 15 ರಿಂದ 20 ದಿನ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ವಾಹನ ಸವಾರರು ನಿತ್ಯ ಪರದಾಟ ನಡೆಸುವಂತಾಗಿದೆ.
ಫ್ಲೈಓವರ್ ಒಂದು ಸ್ಲಾಬ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂದೆ ತೊಂದರೆ ಎದುರಾಗದಂತೆ ಇಡೀ ಮೇಲ್ಸೇತುವೆಯನ್ನು ಪರಿಶೀಲಿಸಿ ಏನಾದರೂ ಸಮಸ್ಯೆಗಳಿದ್ದರೆ ಈಗಲೇ ಸರಿ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ, ಯಾವಾಗ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಲ್ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆ, ಸಂಚಾರ ದುಸ್ತರವಾಗುತ್ತಿದೆ. ಹತ್ತು ನಿಮಿಷ ಕ್ರಮಿಸಬೇಕಾದ ರಸ್ತೆಯಲ್ಲಿ ಈಗ ಗಂಟೆಗಟ್ಟಲೇ ಕಾದು ಆಮೆ ಗತಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಸವಾರರಿಗೆ ಎದುರಾಗಿದೆ. ತುಮಕೂರು ಕಡೆಗೆ ಹೋಗಬೇಕಾದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಇಂಟರ್ ಲಾಕಿಂಗ್ ವ್ಯವಸ್ಥೆ : ಕಳೆದ ಹತ್ತು ವರ್ಷಗಳ ಹಿಂದೆ ಇಂಟರ್ ಲಾಕಿಂಗ್ ಸಿಸ್ಟಮ್ ಬಳಸಿಕೊಂಡು ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ಪಾರ್ಲೆಜಿ ಫ್ಯಾಕ್ಟರಿವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿತ್ತು. ಮೇಲ್ಸೇತುವೆ ನಿರ್ಮಾಣದ ವೇಳೆ ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್ ನಡುವಿನ ಸ್ಲಾಬ್‌ಗಳನ್ನು ಬಿಗಿಗೊಳಿಸಲು ಅಳವಡಿಸುವ ರೋಪ್ (ಕಬ್ಬಿಣದ ವಯರ್)ಗಳಲ್ಲಿ ಒಂದು ಸಡಿಲವಾಗಿದೆ. ಇದನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ವಾರ ಸಮಯಾವಕಾಶ ಕೇಳಿತ್ತು. ಆದರೆ, ತಿಂಗಳಾದರೂ ಈವರೆಗೂ ಸರಿಪಡಿಸಿಲ್ಲ.
ಒಂದು ರೋಪ್‌ನ ಜಾಯಿಂಟ್ನಲ್ಲಿ ಸಮಸ್ಯೆ : ನಿರ್ವಹಣೆ ವೇಳೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ಎನ್‌ಎಚ್‌ಎಐ ಅಧಿಕಾರಿಗಳು 101 ಮತ್ತು 102 ನೇಯ ನಂಬರ್ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಜಾಯಿಂಟ್ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಒಂದು ಸ್ಲಾಬ್ ಮತ್ತು ಇನ್ನೊಂದರ ಮಧ್ಯೆ 16 ರೋಪ್ಗಳನ್ನು ಅಳವಡಿಸಿದ್ದು, ಅದರಲ್ಲಿ ಒಂದು ರೋಪ್‌ನ ಜಾಯಿಂಟ್ ಮಾತ್ರ ಸಮಸ್ಯೆಯಾಗಿದ್ದು, ಉಳಿದ 15 ರೋಪ್‌ಗಳು ಸುಭದ್ರವಾಗಿವೆ.
ನಿತ್ಯ 60 ಸಾವಿರ ವಾಹನ ಸಂಚಾರ : ಮೇಲ್ಸೇತುವೆಯಲ್ಲಿ ಕಾಣಿಸಿದ ದೋಷವನ್ನು ಸರಿಪಡಿಸಲು ತಾತ್ಕಾಲಿಕವಾಗಿ ಎರಡು ಕಡೆಯ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಪ್ರತಿ ದಿನ 50 ರಿಂದ 60 ಸಾವಿರ ವಾಹನಗಳು ಸಂಚರಿಸುತ್ತವೆ. ಉತ್ತರ ಭಾಗದ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ದುರಸ್ತಿ ಅತೀ ಅವಶ್ಯಕವಾಗಿ ಆಗಬೇಕಿದೆ.
ಮೇಲ್ಸೇತುವೆ ಬಂದ್ ಆಗಿರುವುದರಿಂದ ಕೆಳಗಡೆ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿದೆ. ದಿನನಿತ್ಯ ನರಕ ದರ್ಶನವಾಗುತ್ತಿದೆ. ಪೀಣ್ಯ ಸಂಚಾರಿ ಪೊಲೀಸರಂತೂ ಸಾಕು ಸಾಕಾಗಿ ಹೋಗಿದ್ದಾರೆ. ಪೀಣ್ಯದ 100 ಪೊಲೀಸ್ ಸಿಬ್ಬಂದಿ ಜೊತೆಗೆ ಪಕ್ಕದ ಠಾಣೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ರಸ್ತೆಯಲ್ಲಿ ನಿಯೋಜನೆಗೊಳಿಸಲಾಗಿದೆ.
ಇದನ್ನೂ ಓದಿ: 'ಜನರಿಗೆ ಭೀತಿಗೊಳಿಸುವುದನ್ನ ನಿಲ್ಲಿಸಿ'; ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ತೆರವಿಗೆ ಸಂಸದ ಪ್ರತಾಪ್ ಸಿಂಹ ಮನವಿ