ಬೆಂಗಳೂರು : ಖಾಸಗಿ ಶಾಲೆಗಳ ಶುಲ್ಕ ಪಾವತಿಸೋ ವಿಚಾರದಲ್ಲಿ ಶಿಕ್ಷಣ ಇಲಾಖೆ ಮೌನ ವಹಿಸಿದ್ದು, ಎರಡು ಬಾರಿ ಪ್ರತಿಭಟನೆ ನಡೆಸಿದರೂ ಡೋಂಟ್‌ಕೇರ್ ಅಂತಿದೆ. ಅದಕ್ಕೆ ಮೂರನೇ ಬಾರಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಪೋಷಕರು ಅಳಲು ತೋಡಿಕೊಂಡರು.
ಮೌರ್ಯ ಸರ್ಕಲ್ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವ ಪೋಷಕರು ಸರ್ಕಾರ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ಉಪಸ್ಥಿತಿಯಲ್ಲಿ ಶುಲ್ಕ ನಿಗದಿ ತೀರ್ಮಾನ ಮಾಡಬೇಕು. ಹಾಗೂ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವವರೆಗೆ ಶುಲ್ಕ ಪಾವತಿ ದಿನಾಂಕವನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದರು.
ಓದಿ- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಳಿಕ ಪ್ರಾಥಮಿಕ ಶಿಕ್ಷಣದ ಅವಧಿ 15 ವರ್ಷ: ಡಿಸಿಎಂ ಅಶ್ವತ್ಥ ನಾರಾಯಣ
ಶಿಕ್ಷಣ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾದರೆ, ಬಿಬಿಎಂಪಿ ಚುನಾವಣೆ ವೇಳೆ ಒಳ್ಳೇ ಪಾಠ ಕಲಿಸ್ತೀವಿ. ಪೋಷಕರನ್ನ ನಿರ್ಲಕ್ಷ್ಯ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಹೊರ ರಾಜ್ಯದ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂತಾ ಒಮ್ಮೇ ಅಲ್ಲಿಗೆ ಹೋಗಿ ಕಲಿತುಕೊಂಡು ಬನ್ನಿ ಅಂತಾ ಪೋಷಕರು ಶಿಕ್ಷಣ ಸಚಿವರ ವಿರುದ್ಧ ಕಿಡಿಕಾರಿದರು.
ನಮ್ಮ ಬೇಡಿಕೆಗಳಿಗೆ ನಾಳೆ ಸಚಿವರು ಸ್ಪಂದಿಸದಿದ್ರೆ ಮಂಗಳವಾರ ಸಚಿವರ ಮನೆ ಮುಂದೆ ಕಸ ಗುಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕಸ ಗುಡಿಸಿದ ಬಳಿಕ ಪೊರಕೆಯನ್ನ ಸಚಿವರಿಗೆ ಕೊಡುತ್ತೇವೆ. ವಿಧಾನಸೌಧ ಗುಡಿಸೋಕೆ ಪೊರಕೆ ಅವರಿಗೆ ಬಳಕೆಯಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.