ಬೆಂಗಳೂರು: ರಾಜ್ಯ ವಿಧಾನಮಂಡಲವನ್ನು ಕಾಗದ ರಹಿತಗೊಳಿಸುವ ಇ-ವಿಧಾನ ಯೋಜನೆ ಜಾರಿ ಮಾಡುವುದಾಗಿ ಹೇಳಿ ವರ್ಷಗಳೇ ಕಳೆದಿದೆ. ಆದರೆ, ಇನ್ನೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಇ-ವಿಧಾನ ಜಾರಿಗೆ ಅನೇಕ ವಿಘ್ನಗಳು ಎದುರಾಗುತ್ತಿದ್ದು, ಇದೀಗ ಹೊಸ ಕಂಟಕ ಎದುರಾಗಿದೆ.
2014ರಲ್ಲಿ ರಾಜ್ಯದ ವಿಧಾನ ಮಂಡಲವನ್ನು ಕಾಗದ ರಹಿತವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿತ್ತು. ಆ ವೇಳೆ ಹಿಮಾಚಲ ಪ್ರದೇಶ ವಿಧಾನಸಭೆಯನ್ನು ಡಿಜಿಟಲೀಕರಣ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪ ಬಂದಿತ್ತು. ಈ ಸಂಬಂಧ ವಿಧಾನಸಭೆ ಸಚಿವಾಲಯದ ಉನ್ನತಾಧಿಕಾರಿಗಳು ಹಾಗೂ ಐಟಿ ತಜ್ಞರು 2015ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ಕೈಗೊಂಡು ಬಂದಿದ್ದರು.
ಬೆಳಗಾವಿ ಸುವರ್ಣಸೌಧ ಕಟ್ಟಡ ಸೇರಿ ಉಭಯ ಸದನಗಳನ್ನು ಇ-ವಿಧಾನಮಂಡಲವಾಗಿಸಲು ಸುಮಾರು 69 ಕೋಟಿ ರೂ. ವೆಚ್ಚವಾಗಲಿದೆ. ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು. ಆದರೆ, ರಾಜ್ಯ ಹಣಕಾಸು ಇಲಾಖೆ ಅಧಿಕಾರಿಗಳು ಇದಕ್ಕೆ ಹೆಚ್ಚಿನ ಗಮನ ಹರಿಸದಿದ್ದ ಕಾರಣ ನೆನೆಗುದಿಗೆ ಬಿದ್ದಿತ್ತು.
2016ರಲ್ಲಿ ಕೇಂದ್ರ ಸರ್ಕಾರ ನೆರವು ನೀಡುವುದಾಗಿ ಭರವಸೆ ನೀಡಿದ ಬಳಿಕ ಈ ಯೋಜನೆಗೆ ಮತ್ತೆ ಮರುಜೀವ ಸಿಕ್ಕಿತ್ತು. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಎಲ್ಲ ರಾಜ್ಯಗಳ ವಿಧಾನಮಂಡಲವನ್ನು ಕಾಗದ ರಹಿತಗೊಳಿಸಲು ಪೂರ್ಣ ವೆಚ್ಚ ಭರಿಸುವುದಾಗಿ ಕೇಂದ್ರ ಸರ್ಕಾರ ಅಭಯ ನೀಡಿತ್ತು. ಈ ಸಂಬಂಧ ರಾಜ್ಯ ಸರ್ಕಾರ ನಿಧಾನವಾಗಿ ಡಿಜಿಟಲೀಕರಣದ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆದರೆ, ಬಳಿಕ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಾಲಯ ಯೋಜನೆಯ 60% ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ಸೂಚನೆ ನೀಡಿತ್ತು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯವು ಒನ್ ನೇಷನ್, ಒನ್ ಅಪ್ಲಿಕೇಷನ್ ಹೆಸರಿನಡಿ ನ್ಯಾಷನಲ್ ಇ-ವಿಧಾನ್ ಅಪ್ಲಿಕೇಷನ್ ಸಿದ್ಧಪಡಿಸಿದೆ. ಇದರ ವೆಬ್‌ಸೈಟ್‌ಗೆ ಕರ್ನಾಟಕವೂ ಸೇರ್ಪಡೆಗೊಂಡಿದೆ. ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೆವ) ಇದರ ಅನುಷ್ಠಾನದ ಜವಾಬ್ದಾರಿ ಹೊಂದಿತ್ತು. ಈ ಸಂಬಂಧ 2018ರಲ್ಲಿ ರಾಜ್ಯದ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿತ್ತು. ಆದರೆ, ಇದೀಗ ನಾಲ್ಕು ವರ್ಷ ಕಳೆದರೂ ಯೋಜನೆ ಜಾರಿಗೆ ಕಾಲ ಮಾತ್ರ ಕೂಡಿಬಂದಿಲ್ಲ.
ಹಣ ಬಿಡುಗಡೆ ವಿಳಂಬ, ಇ-ವಿಧಾನ ತಂತ್ರಾಶ ಗೊಂದಲ:
ಕೇಂದ್ರ ಸರ್ಕಾರ ಯೋಜನೆಗೆ ಬೇಕಾಗಿರುವ ಹಣವನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಈಗಾಗಲೇ ಹಂತ ಹಂತವಾಗಿ ವಿಧಾನ ಮಂಡಲದ ಸಚಿವಾಲಯದಲ್ಲಿ ಡಿಜಿಟಲೀಕರಣ ಕಾರ್ಯವನ್ನು ನಿಧಾನವಾಗಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗದೇ ಇರುವ ಕಾರಣ ಯೋಜನೆ ಅನುಷ್ಠಾನ ಕುಂಟುತ್ತಾ ಸಾಗಿದೆ.
ಇತ್ತ ನೆವ ಇ-ವಿಧಾನ ತಂತ್ರಾಶವನ್ನು ಅಭಿವೃದ್ಧಿ ಪಡಿಸುತ್ತಿದೆ. ಆದರೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ವಿಧಾನಮಂಡಲ ಕಾರ್ಯವೈಖರಿಯಲ್ಲಿ ವ್ಯತ್ಯಾಸವಿದ್ದು, ನೆವ ಅಭಿವೃದ್ಧಿ ಪಡಿಸುತ್ತಿರುವ ಇ-ವಿಧಾನ ಅಪ್ಲಿಕೇಶನ್ ಸಂಪೂರ್ಣವಾಗಿ ರಾಜ್ಯದ ವಿಧಾನಮಂಡಲಕ್ಕೆ ಹೊಂದಾಣಿಕೆ ಕಷ್ಟ ಸಾಧ್ಯವಾಗುತ್ತಿದೆ ಎಂದು ವಿಧಾನಸಭೆ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ತಾನೇ ವೆಚ್ಚ ಭರಿಸಿ, ತಂತ್ರಾಶ ಅಭಿವೃದ್ಧಿಗೆ ಚಿಂತನೆ:
ಈಗಾಗಲೇ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸಹಕಾರ ಹಾಗೂ ಹಣ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆ, ತಾವೇ ವೆಚ್ಚ ಭರಿಸಿ, ತಮ್ಮದೇ ಕಿಯೋನಿಕ್ಸ್ ಅಥವಾ ಇ-ಆಡಳಿತ ಇಲಾಖೆಯಿಂದ ಇ-ವಿಧಾನ ತಂತ್ರಾಶ ಅಭಿವೃದ್ಧಿ ಪಡಿಸಲು ಸ್ಪೀಕರ್ ಕಾಗೇರಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸಂಸದೀಯ ವ್ಯವಹಾರ ಸಚಿವಾಲಯಕ್ಕೆ ಪತ್ರ ಬರೆದು ಇ-ವಿಧಾನ ಅಪ್ಲಿಕೇಷನ್ ಅನ್ನು ತಾವೇ ಅಭಿವೃದ್ಧಿ ಪಡಿಸುವುದಾಗಿ ಕೋರಿದ್ದಾರೆ. ಈಗಾಗಲೇ ಕೇರಳ, ಬಿಹಾರ ತಮ್ಮದೇ ಖರ್ಚಿನಲ್ಲಿ ತಾವೇ ಇ-ವಿಧಾನ ತಂತ್ರಾಶವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅದರಂತೆ ತಾವೇ ತಂತ್ರಾಶ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಇ-ಆಡಳಿತ ಅಧಿಕಾರಿಗಳಿಗೆ ಇ-ವಿಧಾನ ಅಭಿವೃದ್ಧಿ ಮಾಡಲು ಸೂಚನೆಯನ್ನು ನೀಡಿದ್ದಾರೆ. ಇ-ಆಡಳಿತ ಇಲಾಖೆ ಈಗಾಗಲೇ ತಂತ್ರಾಶ ಸಂಬಂಧ ರೂಪುರೇಷೆಯನ್ನೂ ಸಿದ್ಧಪಡಿಸಿದೆ. ಆದರೆ, ಹಣ ಬಿಡುಗಡೆಯಾಗದೇ ಇರುವುದರಿಂದ ಯೋಜನೆ ಜಾರಿ ಸಾಧ್ಯವಾಗಿಲ್ಲ.
ಇತ್ತ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಸದ್ಯ ಆರ್ಥಿಕ ಇಲಾಖೆ ಯೋಜನೆ ಜಾರಿಗೆ ಬೇಕಾಗಿರುವ ಅಂದಾಜು 69 ಕೋಟಿ ರೂ.ಗೆ ಅನುಮೋದನೆ ನೀಡುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವೇ ಅಭಿವೃದ್ಧಿ ಪಡಿಸಿದ ಇ-ವಿಧಾನ ಯೋಜನೆಗೆ ಅನುದಾನ ನೀಡುತ್ತಾ ಎಂಬ ಗೊಂದಲವೂ ವಿಧಾನಸಭೆ ಸಚಿವಾಲಯ ಅಧಿಕಾರಿಗಳನ್ನು ಕಾಡುತ್ತಿದೆ. ಹೀಗಾಗಿ ಇ-ವಿಧಾನ ಅನುಷ್ಠಾನ ಇನ್ನಷ್ಟು ವಿಳಂಬವಾಗುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.