ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಪಕ್ಷ ಸಂಘಟನೆ ಮಾಡುವುದು ಬಿಟ್ಟು ಸಿನಿಮಾ ಮಾಡಿಕೊಂಡೇ ಇರಿ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ನಿಖಿಲ್ ಗೌಡರನ್ನು ಕೈಬಿಟ್ಟು, ಆ ಜಾಗಕ್ಕೆ ಶರಣಗೌಡ ಕಂದಕೂರರನ್ನು ಆಯ್ಕೆ ಮಾಡಿ ಪಕ್ಷ ಸಂಘಟನೆ ಮಾಡಲಿ. ಹೆಸರಿಗೆ ಮಾತ್ರ ಯುವ ಜೆಡಿಎಸ್ ಅಧ್ಯಕ್ಷರಾಗಿ ಮನೆಯಲ್ಲಿ ಕೂತರೆ ಪಕ್ಷ ಸಂಘಟನೆ ಆಗುವುದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ನಿಮಗೆ ಯುವ ಜೆಡಿಎಸ್ ಸ್ಥಾನ ಏಕೆ ಬೇಕು. ನೀವು ಹೊಸ ಸಿನಿಮಾ ಮಾಡುತ್ತಿದ್ದೀರಂತೆ. ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿನಿಮಾ ಮಾಡಿಕೊಂಡು ಇದ್ದುಬಿಡಿ. ಹಿಂದಿನ ಯುವ ರಾಜ್ಯಾಧ್ಯಕ್ಷರು ವಿದೇಶ ಸುತ್ತುತ್ತಿದ್ದರು. ಈಗಿನ ರಾಜ್ಯಾಧ್ಯಕ್ಷ ಮತ್ತೆ ಸಿನಿಮಾ ತೆಗಿತಾರಂತೆ ಎಂದು ಲೇವಡಿ ಮಾಡಿದ್ದಾರೆ.
ನಿಖಿಲ್‌ರನ್ನ ಯುವ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಮರ್ಯಾದೆ ತೆಗೆಯುತ್ತಿದ್ದಾರೆ. ನಮ್ಮ ಪಕ್ಷ ನಂಬಿ ಬಂದೋರು ನೆಲಸಮ ಆಗುತ್ತಾರೆ. ಇವರನ್ನು ನೋಡಿ ಜಿಗುಪ್ಸೆ ಬಂದಿದೆ ಎಂದು ನಿಖಿಲ್ ನಾಯಕತ್ವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.