ಬೆಂಗಳೂರು: ಪುನೀತ್ ರಾಜ್‌ಕುಮಾರ್ ಸಾವನ್ನು ನನ್ನ ಕೈಯಲ್ಲಿ ನಂಬೋಕೆ ಸಾಧ್ಯವಾಗಿಲ್ಲ. ಅವರ ಟ್ರೈನರ್ ಹೇಳಿದ ಮೇಲೆ ವಿಷ್ಯ ಗೊತ್ತಾಯಿತು. ಮನುಷ್ಯ ಹುಟ್ಟಬೇಕಾದರೆ ಉಸಿರು ಇರುತ್ತೆ ಹೆಸರು ಇರುವುದಿಲ್ಲ. ಸಾಯಬೇಕಾದರೆ ಹೆಸರು ಇರುತ್ತೆ ಉಸಿರು ಇರುವುದಿಲ್ಲ ಇದಕ್ಕೆ ಪುನೀತ್ ಅವರೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪುನೀತ್ ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಇದನ್ನು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಈ ಹುಟ್ಟು ಸಾವು ನಡುವೆ ನಾವು ಏನು ಸಾಧನೆ ಮಾಡುತ್ತೇನೆ ಎಂಬುದು ಬಹಳ ಮುಖ್ಯ ಎಂದಿದ್ದಾರೆ.
ಸಮಾಜದ ಒಂದು ಬದ್ಧತೆ ಇಡೀ ಕುಟುಂಬದಲ್ಲಿರುವುದನ್ನು ನಾವು ಗಮನಿಸಿದ್ದೇವೆ. ಸಾಮಾಜಿಕ ಸೇವೆ, ಬದ್ಧತೆ ಎಲ್ಲರಲ್ಲೂ ಇರಲು ಸಾಧ್ಯವಿಲ್ಲ. ವ್ಯಕ್ತಿ ನಮ್ಮಿಂದ ದೂರವಾಗಿಲ್ಲ, ಒಂದು ಶಕ್ತಿ ದೂರ ಹೋಗಿದೆ ಎಂದು ಭಾವಿಸಿದ್ದೇನೆ. ಸಿಎಂ ಇಂದು ಪುನೀತ್ ರಾಜ್‌ಕುಮಾರ್ ಅವರಿಗೆ ಕನ್ನಡ ರತ್ನ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ರಾಜ್‌ಕುಮಾರ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಘೋಷಿಸಿದ್ದರು. ಆಗ ನಾನು ಕೂಡ ಇದ್ದೆ. ವಿಧಾನಸೌಧ ಎದುರೇ ಪ್ರಶಸ್ತಿ ನೀಡಲಾಗಿತ್ತು. ಅಂದು ರಾಜ್‌ಕುಮಾರ್ ಬದುಕಿದ್ದರು. ಆದ್ರೆ ಪುನೀತ್ ಇಂದು ನಮ್ಮೊಂದಿಗೆ ಇಲ್ಲ ಎಂದು ಸ್ಮರಿಸಿದರು.
ಪುನೀತ್ ಹೆಸರಲ್ಲಿ ಸ್ಟುಡಿಯೋ ತೆರೆಯಿರಿ:
ಇದೇ ವೇಳೆ ಡಿ.ಕೆ ಶಿವಕುಮಾರ್, ಯಾವುದೇ ವಿವಾದಗಳು ಇಲ್ಲದ ವ್ಯಕ್ತಿ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಒಂದು ಸಂಸ್ಥೆ ಅಥವಾ ಸ್ಟುಡಿಯೋವೊಂದನ್ನು ತೆರೆಯಬೇಕು. ಅದರಲ್ಲಿ ಸಿನಿಮಾ ಮಾಡುವ ಬಗ್ಗೆ ತರಬೇತಿ ನೀಡುವಂತೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.