ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಅಲ್ಲಿಂದಲೇ ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ ಊಟ - ವಸತಿ ವ್ಯವಸ್ಥೆ ಕಲ್ಪಿಸಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಗಮನ ಹರಿಸಲಿ
ರಾಜ್ಯ ಕಂದಾಯ ಸಚಿವರೂ ಕ್ವಾರಂಟೈನ್ ಗೊಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ವರ್ಗಾವಣೆಗೊಂಡಿರುವ ಬಿಬಿಎಂಪಿ ಆಯುಕ್ತರಿಗೆ ಕಂದಾಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿರುವುದರಿಂದ ಪ್ರವಾಹ ಪರಿಸ್ಥಿತಿಯ ಉಸ್ತುವಾರಿ ಕಾರ್ಯ ಕುಂಠಿತಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕಡೆ ತಕ್ಷಣ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿರುವ ಮುಖ್ಯಮಂತ್ರಿಗಳು ತಕ್ಷಣ ಹಿರಿಯ ಸಹದ್ಯೋಗಿಗಳಿಗೆ ಜವಾಬ್ದಾರಿ ಹಂಚಿ ಅತಿವೃಷ್ಟಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳುಹಿಸಿ ಪ್ರತ್ಯಕ್ಷದರ್ಶಿ ವರದಿ ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷದ ಹೊಡೆತದಿಂದಲೇ ಜನ ಇನ್ನೂ ಚೇತರಿಕೆ ಕಂಡಿಲ್ಲ:
ಕಳೆದ ವರ್ಷದ ಆಗಸ್ಟ್ - ಅಕ್ಟೋಬರ್ ತಿಂಗಳ ಪ್ರವಾಹದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಹಳೆಯ ಹಾನಿಯ ಪರಿಹಾರ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ನಿರಂತರವಾಗಿ ಈ ಬಗ್ಗೆ ನಾವು ಎಚ್ಚರಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಅವರು ಕೆಂಡಾಮಂಡಲರಾಗಿದ್ದಾರೆ.