ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಇಂದು ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಸಿದ್ದರಾಮಯ್ಯನವರ ಪಂಚೆ ಕಳಚಿಕೊಂಡಿತ್ತು. ಗಂಭೀರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ಕಾರಣ ಅವರಿಗೆ ಪಂಚೆ ಕಳಚಿರುವುದು ತಕ್ಷಣ ಗಮನಕ್ಕೆ ಬಂದಿರಲಿಲ್ಲ.
ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಸಿದ್ದರಾಮಯ್ಯನವರ ಬಳಿಗೆ ಬಂದು, 'ಸರ್, ನಿಮ್ಮ ಪಂಚೆ ಕಳಚಿಕೊಂಡಿದೆ' ಎಂದು ಕಿವಿಯಲ್ಲಿ ಮೆಲ್ಲಗೆ ಉಸುರಿ ತಮ್ಮ ಆಸನದಲ್ಲಿ ಹೋಗಿ ಕುಳಿತುಕೊಂಡರು. ಈ ವೇಳೆ ತಮಾಷೆಯಾಗಿ ಮಾತನಾಡಿದ ಸಿದ್ದರಾಮಯ್ಯ, 'ಸ್ವಲ್ಪ ಪಂಚೆ ಕಳಚಿಕೊಬುಟ್ಟದೆ, ಕಟ್ಟಿಕೊಂಡು ಆಮೇಲೆ ಮಾತನಾಡುತ್ತೇನೆ. ಪಂಚೆ ಕಳಚಿಕೋಬಿಟ್ಟಿದೆ ಈಶ್ವರಪ್ಪ. ಯಾಕೋ ಇತ್ತೀಚೆಗೆ ಸ್ವಲ್ಪ ಹೊಟ್ಟೆ ದಪ್ಪ ಆಯ್ತು, ಕಳಚಿಕೋತದೆ' ಅಂದರು. ಈ ವೇಳೆ ಸದನ ನಗೆಗಡಲಲ್ಲಿ ಮುಳುಗಿತು.
ಈ ಸಂದರ್ಭದಲ್ಲಿ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, 'ನಮ್ಮ ಪಕ್ಷದ ಅಧ್ಯಕ್ಷರು ಗುಟ್ಟಾಗಿ ಇದು ಪಕ್ಷದ ಮಾನ ಅಂತ ಹೇಳಿ ಹೋದರೆ ಇವರು ಅದನ್ನು ಊರಿಗೆಲ್ಲಾ ಹೇಳ್ತಾರೆ' ಅಂದರು. ಆಗ ಇದಕ್ಕೆ ಪ್ರತ್ರಿಕ್ರಿಯಿಸಿದ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪನವರು ನಗುತ್ತಾ, 'ಅವರ ಶ್ರಮ ಎಲ್ಲಾ ವ್ಯರ್ಥವಾಯಿತು' ಎಂದರು.
ಆಗ ಮತ್ತೆ ಎದ್ದು ನಿಂತು ಮಾತನಾಡಿದ ಕೆ.ಆರ್.ರಮೇಶ್ ಕುಮಾರ್ ಅವರು, 'ಈಶ್ವರಪ್ಪನವರನ್ನು ಗುರಿಯಾಗಿಸಿ, ಅವರ ಉದ್ಯೋಗವೇ ನಮ್ಮ ಪಂಚೆ ಕಳಚೋದು, ನೋಡಿ ಕಾಯ್ತಾ ಕೂತಿದ್ದಾರೆ' ಎಂದು ಕಿಚಾಯಿಸಿದರು.
ಆಗ ಸಿದ್ದರಾಮಯ್ಯ, 'ಅವರು ಪಾಪ ಟ್ರೈ ಮಾಡ್ತಾರೆ ಅವೆಲ್ಲಾ ಸಾಧ್ಯ ಆಗಲ್ಲ. ಈ ಪಂಚೆ ಮೊದಲು ಬಿಚ್ಚೋಗ್ತಿರಲಿಲ್ಲ. ಇತ್ತೀಚೆಗೆ ಕೊರೊನಾ ರೋಗ ಬಂದ್ಮೇಲೆ ನನ್ನ ಗಾತ್ರ 4 ರಿಂದ 5 ಕೆಜಿಯಷ್ಟು ಜಾಸ್ತಿಯಾಯ್ತು ಎಂದರು. ಇದು ಬಂದ್ಮೇಲೆ ಪಂಚೆ ಜಾರೋದಕ್ಕೆ ಶುರುವಾಗಿದೆ. ಬಹಳ ಜನ ನಿಲುವಂಗಿ ಹಾಕೋತ್ತಾರೆ' ಎಂದು ಹೇಳಿದರು.