ಬೆಂಗಳೂರು: ಇಂದಿರಾ ಗಾಂಧಿ ಅವರ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಾಗಿತ್ತು. 100 ಪೈಸೆ ತೆರಿಗೆ ಇತ್ತು. ಆಗಾ ಇಂದಿರಾ ಗಾಂಧಿ ಸರ್ಕಾರವನ್ನು ವಾಜಪೇಯಿ ಅವರು ಕ್ರಿಮಿನಲ್ ಲೂಟ್ ಎಂಬ ಪದ ಬಳಿಸಿದ್ದರು. ನಾನು ಅದಕ್ಕಿಂತ ಕೆಟ್ಟ ಪದ ಬಳಸಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕ್ರಿಮಿನಲ್ ಲೂಟ್ ಮಾಡುತ್ತಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆಲ್ಲ ಯಾರು ಹೊಣೆ?
ನಿಯಮ 60ರ ಅಡಿಯಲ್ಲಿ ಇತ್ತೀಚಿನ ಬೆಳವಣಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಒಂದೊಂದು ವರ್ಷದಲ್ಲಿ ಗ್ಯಾಸ್, ಪೆಟ್ರೋಲ್ ಬೆಲೆ ಯದ್ವಾತದ್ವಾ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆ ನಮ್ಮ ಕೈಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ತೈಲ ಕಂಪನಿಗಳು ಏರಿಕೆ ಮಾಡುತ್ತವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.
ಏನೂ ಕೊಳ್ಳಂಗಿಲ್ಲ.. ಹಿಂಗಾದ್ರೆ ಹೆಂಗೆ?
ಎಲ್ಲಾ ಪದಾರ್ಥಗಳು ಕೂಡ ಇವತ್ತು ಗಗನಕ್ಕೇರಿವೆ. ಅಕ್ಕಿ, ಬೆಳೆ, ಕಬ್ಬಿಣ, ಸಿಮೆಂಟ್, ಹೋಟೆಲ್ ಪದಾರ್ಥಗಳು ಸೇರಿದಂತೆ ಎಲ್ಲಾ ಜೀವನ ಅವಕಶ್ಯಕ ವಸ್ತುಗಳು ಗಗನ ಮುಟ್ಟಿವೆ. ಕಳೆದ 2 ವರ್ಷಗಳಿಂದ ನಿರಂತರವಾಗಿ ಬೆಲೆಗಳು ಏರುತ್ತಲೇ ಇವೆ. ಇವತ್ತು ಸಾಮಾನ್ಯ ಜನರು, ಮಾಧ್ಯಮ ಜನರ ಜೀವನ ನಿರ್ವಹಣ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಾನಸಭೆ ಅಧಿವೇಶನ ನಡೆಸದೇ ನೀವು ನಿರ್ಲಕ್ಷ್ಯ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾನೂನಿಗೆ ನಿಮ್ಮಲ್ಲಿ ಕಿಮ್ಮತ್ತಿಲ್ಲ
ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಯಬೇಕು ಅಂತ ಕಾನೂನು ಪಾಸ್ ಮಾಡಿದ್ದೇವೆ. ಈ ಕಾನೂನಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಧ್ಯಪ್ರವೇಶಿದ ಕಾನೂನು ಸಚಿವ ಮಾಧುಸ್ವಾಮಿ, ಕೋವಿಡ್ ಇದ್ದುದರಿಂದ ಅಧಿವೇಶನ ಮಾಡಿಲ್ಲ ಎಂದರು. ಆಗ ಸಿದ್ದರಾಮಯ್ಯ ಹಾಗಾದರೆ ಸಂಸತ್ ಕಲಾಪ ನಡೆಯಿತ್ತಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ನಿರ್ಲಕ್ಷ್ಯದಿಂದ ವಿಧಾನಸಭೆಯ ಮಹತ್ವವೇ ಹೋಗುತ್ತಿದೆ. ವಿಧಾನಸಭೆಗೆ ಮಹತ್ವವನ್ನು ಕೊಡಬೇಕಾಗುತ್ತದೆ. 10 ದಿನಗಳ ಕಲಾಪದ ಬಗ್ಗೆ ನೋಟಿಸ್ ನೀಡಿದ್ದೀರಿ ಇನ್ನೂ 5 ದಿನ ಹೆಚ್ಚುವರಿಯಾಗಿ ಸದನ ನಡೆಸಬೇಕು ಎಂದು ಹೇಳಿದರು.