ಬೆಂಗಳೂರು: ವೈಯಕ್ತಿಕ ಸ್ನೇಹ, ರಾಜಕಾರಣ, ಆರ್‌ಎಸ್‌ಎಸ್ ಮತ್ತು ಸಿದ್ದಾಂತಗಳ ಕುರಿತು ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು.
2022-23ನೇ ಸಾಲಿನ ಬಜೆಟ್ ಅಂದಾಜುಗಳ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಚರ್ಚೆ ಆರಂಭಿಸಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಒಳ್ಳೆಯ ಸ್ನೇಹಿತರು. ಅವರದು-ತಮ್ಮದು ಹಳೇ ಸ್ನೇಹ ಎಂದು ಹೇಳಿ, ಬಜೆಟ್ ಬಗ್ಗೆ ಟೀಕೆ ಮಾಡಿದಾಗ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸ್ನೇಹಿತರು ಎಂದು ಹೇಳುತ್ತೀರಿ, ಹೀಗೆ ಮಾತನಾಡಿದರೆ ಹೇಗೆ ಎಂದಾಗ ಸಿದ್ದರಾಮಯ್ಯ ಸ್ನೇಹ ಬೇರೆ, ರಾಜಕಾರಣ ಬೇರೆ ಎಂದರು.
ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಆದರೆ ನಿಮ್ಮದು ಆರ್‌ಎಸ್‌ಎಸ್ ಹಿನ್ನೆಲೆಯಲ್ಲಿ ನಿಮ್ಮೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯವಿದೆ. ರಾಜಕಾರಣ ಬೇರೆ, ಹೊರಗಡೆ ನಮ್ಮ ಸ್ನೇಹ ಇದ್ದೇ ಇರುತ್ತದೆ ಎಂದಾಗ, ಆಗ ಸ್ಪೀಕರ್ ಅವರು, ನಮ್ಮದು-ನಿಮ್ಮದು ಒಳ್ಳೆಯ ಸ್ನೇಹ, ನನಗೆ ಗೊತ್ತು ನನ್ನ ಮೇಲೆ ನಿಮಗೆ ಬಹಳ ಪ್ರೀತಿ ಇದೆ ಎಂದರು.
ಸ್ನೇಹವೇ ಬೇರೆ, ರಾಜಕೀಯವೇ ಬೇರೆ. ನೀವು ಆರ್‌ಎಸ್‌ಎಸ್ ಹಿನ್ನೆಲೆಯುಳ್ಳವರು. ನಾನು ಬೇರೆ ಹಿನ್ನೆಲೆಯವನು. ಮನುಷ್ಯತ್ವ ಮುಖ್ಯ. ನೀವು ನನ್ನನ್ನು, ನಾನು ನಿಮ್ಮನ್ನು ಗೌರವಿಸುವುದು ಬೇರೆ. ಆದರೆ, ಇಲ್ಲಿ ರಾಜಕೀಯವಾಗಿ ಮಾತನಾಡಬೇಕಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾದಿ ಬಿಟ್ಟು ಬೇರೆ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಾರೆ ಎಂದು ಅಂದುಕೊಂಡಿದ್ದೆ ಎಂದಾಗ, ಮಧ್ಯಪ್ರವೇಶಿಸಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿ ಬೊಮ್ಮಾಯಿ ಅವರು ನಮಗಿಂತ ಹೆಚ್ಚಿನ ಆರ್‌ಎಸ್‌ಎಸ್ ಆಗಿದ್ದಾರೆ. ಆರ್‌ಎಸ್‌ಎಸ್ ಎಂದರೆ ಸಂಸ್ಕಾರ ನೀಡುವ ಸಂಸ್ಥೆ. ಅದರ ಪ್ರಭಾವದ ಮೇಲೆ ಒಳ್ಳೆಯ ಬಜೆಟ್ ನೀಡಿದ್ದಾರೆ. ಅವರು ನಮಗಿಂತ ದೊಡ್ಡ ಆರ್‌ಎಸ್‌ಎಸ್ ಎಂದು ಹೇಳಿ, ಮುಖ್ಯಮಂತ್ರಿಗಳ ಬಜೆಟ್ ಚೆನ್ನಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಆಗ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ 2008ರಲ್ಲಿ ಬಿಜೆಪಿ ಸೇರಿದ್ದು, ಅವರ ತಂದೆ ಪ್ರಭಾವ ಇರುತ್ತದೆ ಎಂಬುದು ನನ್ನ ಅನಿಸಿಕೆ. ಆದರೆ ಆರ್‌ಎಸ್‌ಎಸ್ ಮುಂದೆ ಅವರ ತಂದೆಯ ಪ್ರಭಾವ ಸೋತಿದೆ. ಬಿಜೆಪಿ ಸೇರಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮೂಲ ಬಿಜೆಪಿಯವರಾದ ನೀವಾಗಲೀ, ಈಶ್ವರಪ್ಪನವರಾಗಲೀ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಅಶೋಕ್ ಅವರ ಕಾಲೆಳೆದರು.
'ಏಳು ಸಚಿವರು ಮಾತ್ರ ಮೂಲ ಬಿಜೆಪಿಗರು': ಮತ್ತೆ ಆಶೋಕ್ ಮಾತನಾಡಿ, ಅದು ಅವರವರ ಅದೃಷ್ಟ. ಅವರು ಮುಖ್ಯಮಂತ್ರಿಯಾಗಿದ್ದಾರೆ. ನೀವು ಜನತಾ ದಳದಿಂದ ಕಾಂಗ್ರೆಸ್‌ಗೆ ಹೋಗಿ ಮುಖ್ಯಮಂತ್ರಿಯಾಗಲಿಲ್ಲವೇ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ರಾಮಲಿಂಗಾರೆಡ್ಡಿಯವರು ಈಗಿನ ಬಿಜೆಪಿ ಸರ್ಕಾರದಲ್ಲಿ ಏಳು ಸಚಿವರು ಮಾತ್ರ ಮೂಲ ಬಿಜೆಪಿಗರು. ಉಳಿದವರೆಲ್ಲ ವಲಸೆ ಹೋದವರು ಎಂದರು.
ಆಗ ಅಶೋಕ್ ಅವರು ನನಗೆ ನೀವು ಹೇಳಿದ್ದು ಕೇಳಿಸುತ್ತಿಲ್ಲ ಎಂದಾಗ, ಒಳ್ಳೆಯದು ಕೇಳಿಸಿದರೂ ಕೇಳಿಸದಂತೆ ನಡೆದುಕೊಳ್ಳುತ್ತೀರಿ ಎಂದು ಸಿದ್ದರಾಮಯ್ಯ ಹೇಳಿದಾಗ ಸದನದಲ್ಲಿ ನಗೆಯ ಅಲೆ ಮೂಡಿತು.
ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಮಾತ್ರ ಏನೂ ಮಾತನಾಡದೆ ಎಲ್ಲವನ್ನೂ ಕೇಳುತ್ತಾ ಕುಳಿತಲ್ಲೇ ನಗುತ್ತಿದ್ದರು. ನಂತರ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆ ಮುಂದುವರೆಸುವ ಮೂಲಕ ಈ ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.
ಇದಕ್ಕೂ ಮುನ್ನ ಸಚಿವರಾದ ಅಶೋಕ್ ಹಾಗೂ ಮುನಿರತ್ನ ಅವರನ್ನು ಉದ್ದೇಶಿಸಿ ಸಚಿವರು ಹೀಗೆ ಓಡಾಡಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಬಜೆಟ್ ಮಂಡಿಸುವಾಗ ನಾವು ಕೇಳಿದ್ದೇವೆ. ಈಗ ಬಜೆಟ್ ಮೇಲೆ ಮಾತನಾಡುವಾಗ ಓಡಾಡಿದರೆ ಹೇಗೆ ಎಂದರು. ಅಷ್ಟರಲ್ಲಿ ಅಶೋಕ್ ಅವರು, ನಾನು ನೀರು ಕುಡಿಯಲು ಹೋಗುತ್ತಿದ್ದೆ. ನೀವು ಬೇಡ ಎಂದರೆ ಕೂರುತ್ತೇನೆ ಎಂದು ವಾಪಸ್ ಬಂದು ಕುಳಿತರು.
ಆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನೀರು ಇಲ್ಲ, ಮತ್ತೊಂದು ಇಲ್ಲ. ನೀವು ಹೇಳಿದ ಮೇಲೆ ಅವರು ಬಂದು ಕುಳಿತಿದ್ದಾರೆ. ಎದ್ದು ಹೊರಟಿದ್ದರು. ಅಲ್ಲಿಗೆ ನೀರು ತರಿಸಿಕೊಳ್ಳಬಹುದಲ್ಲವೇ ಎಂದರು. ಆಗ ಅಶೋಕ್ ಅವರಿಗೆ ನೀರು ತಂದುಕೊಡಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ: ಮುನ್ನೋಟ ಇಲ್ಲದ ಬಜೆಟ್ ಮಂಡನೆ: ಕಲಾಪದಲ್ಲಿ ಸಿದ್ದರಾಮಯ್ಯ ಕೆಂಡ