ಬೆಂಗಳೂರು : ನಾವು ಈಗಾಗಲೇ ರಚಿಸಿರುವ ಜಾತಿ ಜನಗಣತಿ ಉಪಯೋಗಿಸಿಕೊಂಡು ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬಹುದು ಎಂಬ ಮನವಿಯನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಮೂರು ಸೂತ್ರವನ್ನು ಸುಪ್ರೀಂ ತೀರ್ಪಿನಲ್ಲಿ ತಿಳಿಸಿದೆ. ಈ ಎಲ್ಲಾ ಅಂಶವನ್ನು ನಮ್ಮ ವರದಿ ಒಳಗೊಂಡಿದೆ.
ಸರ್ಕಾರ ಪ್ರತಿಪಕ್ಷಗಳನ್ನು ಕರೆದು ಈ ಬಗ್ಗೆ ಸಭೆ ನಡೆಸಬೇಕು. ಇಲ್ಲವಾದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ. ಜನಸಂಖ್ಯೆ ಆಧಾರಿತ ಮೀಸಲಾತಿ ಹಂಚಿಕೆಯಾದರೆ ಉತ್ತಮ ಎಂದರು.
ಸರ್ಕಾರ ಪ್ರತಿಪಕ್ಷ ನಾಯಕರ ಸಭೆ ಕರೆಯಬೇಕು. ಆಗ ಕೂಲಂಕಷ ಚರ್ಚೆ ಆಗಿ ಪರಿಹಾರ ಸಿಗಲಿದೆ. ಕಾಂತರಾಜ್ ವರದಿ ಒಪ್ಪಿ ಅನುಮೋದನೆ ಪಡೆದು ಸುಪ್ರೀಂಕೋರ್ಟ್‌ಗೆ ಈ ಸಂಬಂಧ ವಿವರಣೆ ಸಲ್ಲಿಸಬೇಕು. ನಮ್ಮ ಸರ್ಕಾರ ಇದ್ದಾಗ ಸಿದ್ಧಪಡಿಸಿದ ವರದಿಯಲ್ಲಿ ಸುಪ್ರೀಂಕೋರ್ಟ್ ಸೂಚಿಸಿದ ಎಲ್ಲಾ ಮೂರು ಅಂಶಗಳು ಅಳವಡಿಕೆಯಾಗಿವೆ ಎಂದರು.
ತೀರ್ಪಿನ ವಿವರ: ಮಾ.4, 2021ಕ್ಕೆ ತೀರ್ಪು ಬಂದಿದೆ. ಮಹಾರಾಷ್ಟ್ರದಲ್ಲಿ 2019-20ರಲ್ಲಿ ಅಲ್ಲಿನ ಸ್ಥಳೀಯ ಸಂಸ್ಥೆಗೆ ಚುನಾವಣೆ ಘೋಷಣೆ ಮಾಡಿ ಪಂಚಾಯತ್ ಕಾಯ್ದೆ ಅಡಿ ಚುನಾವಣಾ ನೋಟಿಫಿಕೇಷನ್ ಜಾರಿಯಾಗಿದೆ. ನಾಲ್ಕು ಪಿಟಿಷನ್ ಸೇರಿಸಿ ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳು ತೀರ್ಪು ಕೊಡುತ್ತಾರೆ. ಕೃಷ್ಣರಾವ್ ಗೌಳಿ ರಿಟ್ ಪಿಟಿಷನರ್ ಆಗಿದ್ದರು.
ಒಬಿಸಿ ಶೇ.27, ಎಸ್ಸಿಎಸ್ಟಿಗಳಿಗೆ ಶೇ.18 ರಷ್ಟು ಮೀಸಲಾತಿ ಇತ್ತು. ಕೆಲ ಜಿಲ್ಲೆಯಲ್ಲಿ ಮೀಸಲಾತಿ ಶೇ.50 ಕ್ಕಿಂತ ಹೆಚ್ಚಾಗಿರುತ್ತದೆ. ಸುಪ್ರೀಂ ಕೋರ್ಟ್ ಚುನಾವಣೆ ನಡೆಸಲು ಅವಕಾಶ ನೀಡುತ್ತದೆ. ತೀರ್ಪು ಬರುವವರೆಗೂ ಚುನಾವಣಾ ಪ್ರಕ್ರಿಯೆ ನಡೆಯಲಿ, ತೀರ್ಪು ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಿ ಎನ್ನುತ್ತದೆ.
ಕೊನೆಗೆ ತೀರ್ಪಲ್ಲಿ ಮೂರು ಹಂತದ ವಿಷ್ಲೇಷಣೆ ಆಗಬೇಕು ಎನ್ನುತ್ತದೆ. ಒಂದು ಪ್ರತ್ಯೇಕ ಆಯೋಗ ರಚಿಸಿ ಅವರು ಹಿಂದುಳಿದ ವರ್ಗದ ಪರಿಸ್ಥಿತಿ, ಜನಸಂಖ್ಯೆಯ ವಿಚಾರಣೆ ನಡೆಸಬೇಕು, ಒಟ್ಟಾರೆ ಸ್ಥಾನಗಳು ಹಿಂದುಳಿದ ವರ್ಗಕ್ಕೆ ನೀಡಿದ್ದು, ಶೇ.50 ಮೀರಬಾರದು ಎಂದಿದೆ. ಮೀಸಲಾತಿ ಹಂಚಿಕೆ ಸಂವಿಧಾನ ಬದ್ಧವಾಗಿ ಆಗಿಲ್ಲ. ಮರು ಚುನಾವಣೆ ನಡೆಸಬೇಕು ಎಂದು ತೀರ್ಪು ನೀಡಿದರು.
ಇದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇತರೆ ರಾಜ್ಯಕ್ಕೂ ಅನ್ವಯಿಸುತ್ತದೆ. ನಾವು ಶೇ.37ರಷ್ಟು ಮೀಸಲಾತಿ ನೀಡಿದ್ದೇವೆ. ಒಬಿಸಿಗಳಿಗೆ ಹಲವೆಡೆ ಮೀಸಲಾತಿಯಲ್ಲಿ ನಷ್ಟ ಆಗಲಿದೆ ಎಂದರು.
ರಾಜ್ಯದಲ್ಲೂ ಜಾರಿಯಾಗಲಿ : ಈಗ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿದೆ. ರಾಜ್ಯದಲ್ಲಿ ಈ ಚುನಾವಣೆ ನಡೆದರೆ ಸುಪ್ರೀಂಕೋರ್ಟ್ ತೀರ್ಪು ಅನ್ವಯವಾಗಲಿದೆ. ನಾವು ಅಧಿಕಾರದಲ್ಲಿದ್ದಾಗ ಕಾಂತರಾಜ್ ನೇತೃತ್ವದಲ್ಲಿ ಜಾತಿ ಜನಗಣತಿ ನಡೆಸಿದ್ದೆವು. ಇದೀಗ ಅದನ್ನು ಜಾರಿಗೆ ತರಬೇಕು ಎಂದರು.
ಹರ್ಷ ಕೊಲೆ ಪ್ರಕರಣ: ಇನ್ನೂ ಹರ್ಷ ಕೊಲೆ ಪ್ರಕರಣ ಸಂಬಂಧ ಮಾತನಾಡಿ, ಸೆಕ್ಷನ್ 144 ಜಾರಿಯಲ್ಲಿದ್ದರೂ ಯುವಕನ ಶವದ ಮೆರವಣಿಗೆಗೆ ಪೊಲೀಸರು ಏಕೆ ಅವಕಾಶ ನೀಡಿದರು. ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತಿತರೆ ಬಿಜೆಪಿ ನಾಯಕರು ಭಾಗವಹಿಸಿದ್ದು, ಇದು ಸರ್ಕಾರಿ ಪ್ರಾಯೋಜಿತ ಮೆರವಣಿಗೆ ಆಗಿದೆ.
ಆ ವೇಳೆ ಕಲ್ಲು ತೂರಾಟ ನಡೆದಿದೆ. ಸರ್ಕಾರವೇ ಜಾರಿಗೆ ತಂದ ಸೆಕ್ಷನ್ 144 ಅನ್ನು ಉಲ್ಲಂಘನೆ ಮಾಡಿದೆ. ಶಿವಮೊಗ್ಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಗೆ ಬಿಜೆಪಿ, ಆರ್ಎಸ್ಎಸ್, ಸಂಘ ಪರಿವಾರ ಕಾರಣ. ಇದು ನಾಗರಿಕ ಸರ್ಕಾರವಾ? ತಲ್ವಾರ್ ಹಿಡಿದು ಓಡಾಡುವ ಮೂಲಕ ಗೂಂಡಾ ಸರ್ಕಾರ ಇಲ್ಲಿದೆ. ಆಗಿರುವ ನಷ್ಟಕ್ಕೆ ಸರ್ಕಾರವೇ ನೇರ ಹೊಣೆ. ಜೊತೆಗೆ ಈಶ್ವರಪ್ಪ, ರಾಘವೇಂದ್ರ ನೇರ ಕಾರಣರಾಗುತ್ತಾರೆ ಎಂದರು.
ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ : ಹರ್ಷ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಮಾತನಾಡಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ, ಈಶ್ವರಪ್ಪ ರಾಷ್ಟ್ರಧ್ವಜ ಸಂಬಂಧ ನೀಡಿದ ಹೇಳಿಕೆ ಜವಾಬ್ದಾರಿ ಮರೆತ ಹೇಳಿಕೆಯಾಗಿದೆ. ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ಅಲ್ಲಿಗೆ ನಮ್ಮ ಹೋರಾಟಕ್ಕೆ ಬೆಂಬಲ ಅವರ ಪಕ್ಷದಿಂದಲೇ ಸಹಮತ ಸಿಕ್ಕಿದೆ. ಈಶ್ವರಪ್ಪ ಸರ್ಕಾರಕ್ಕಿಂತ ದೊಡ್ಡವರಲ್ಲ.
ಹಾಗಾಗಿ, ಸರ್ಕಾರ ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ತೆಗೆದುಕೊಳ್ಳಬೇಕು. ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾಗಿರುವ ಸಂಘ- ಸಂಸ್ಥೆ ನಿಷೇಧಿಸಲಿ. ಸರ್ಕಾರ ಬೇಕಾದರೆ ಎನ್ಐಎಗೆ ತನಿಖೆ ವಹಿಸಲಿ. ನಾವು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.
ಮೇಲ್ಮನೆ ಹಾಗೂ ಕೆಳಮನೆ ಸದಸ್ಯರು ವಿಧಾನಸೌಧದ ರಾಜಭವನದವರೆಗೆ ಪಾದಯಾತ್ರೆ ತೆರಳಿ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸುತ್ತೇವೆ. ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದರು.