ಬೆಂಗಳೂರು: ನಾನು ಈಗ ಬಾದಾಮಿ ಕ್ಷೇತ್ರದ ಶಾಸಕ. ನಾನು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಅಪ್ರಸ್ತುತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಗೆ ಇನ್ನೂ ಎರಡು ವರ್ಷ ಮೂರು ತಿಂಗಳು ಬಾಕಿ ಇದೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶ ಇಲ್ಲ. ಈ ಬಗ್ಗೆ ಜಮೀರ್ ನನ್ನ ಬಳಿ ಚರ್ಚೆ ಮಾಡಿಲ್ಲ. ನಾನು ಚಾಮರಾಜನಗರದಿಂದ ಹಾಗೂ ಜಮೀರ್ ರಾಮನಗರದಿಂದ ಸ್ಪರ್ಧಿಸುವ ಬಗ್ಗೆ ಮಾಹಿತಿ ಇಲ್ಲ. ಸದ್ಯ ನಾನು ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ. ಈ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ನಾನು ಕೊಡವರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಅವರ ಸಂಪ್ರದಾಯದ ಮೇಲೆ ಗೌರವ ಇದೆ. ಬೇರೆ ಬೇರೆಯವರು ಗೋಮಾಂಸ ತಿನ್ನುತ್ತಾರೆ ಅಂತ ಹೇಳಿದ್ದೆ. ನಾನು ಕೊಡವರು ಅಂತ ಹೇಳಿಲ್ಲ. ಆದರೂ ಅದು ಸಮುದಾಯಕ್ಕೆ ಬೇಸರ ತರಿಸಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದೆ. ಇದನ್ನು ಮತ್ತೆ ಮತ್ತೆ ಕೆದುಕುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ನಾನು ಒಪ್ಪದಿದ್ರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಆಗ್ತಿರಲಿಲ್ಲ ಅಂತ ಹೇಳಿದ್ದೆ. ಹೈಕಮಾಂಡ್ ಒಪ್ಪಿದ್ದರಿಂದಲೇ ನಾನು ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿಕೊಂಡೆ. ಲಿಂಬಾವಳಿ ಏನೇ ಹೇಳಿದ್ರು ಸಿಎಂ ಯಡಿಯೂರಪ್ಪ ಹೇಳಿಕೆಯೇ ಅಂತಿಮ. ವಿಲೀನ ಇಲ್ಲ ಅಂತ ಹೇಳಿದ್ರೆ ಅದೇ ಫೈನಲ್ ಎಂದು ಸಿದ್ದರಾಮಯ್ಯ ಇದೇ ವೇಳೆ ವಿವರಿಸಿದರು.
ಅಖಂಡ ಜೊತೆ ಮಾತನಾಡುತ್ತೇನೆ
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆ ವಿಚಾರವಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನು ಕರೆದು ಮಾತನಾಡ್ತೀನಿ. ಆ ಬಳಿಕ ಡಿ.ಕೆ.ಶಿವಕುಮಾರ್ ಜತೆ ಮಾತನಾಡ್ತೀನಿ ಎಂದರು.
ವಿಲೀನದಿಂದ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ
ಬಿಜೆಪಿ B-ಟೀಮ್ ಜೆಡಿಎಸ್ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರ ನಡೆಯಿಂದ ಕಾರ್ಯಕರ್ತರಿಗೆ ಬೇಸರ ಆಗುತ್ತೆ, ಮುಂದೆ ಪಕ್ಷವೇ ಇರಲ್ಲ. ಬಿಜೆಪಿ ಜೊತೆ ಜೆಡಿಎಸ್ ವಿಲೀನದಿಂದ ಏನೂ ಆಗಲ್ಲ. ಆದರೆ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡವರು ವಿಲೀನದಿಂದ ದೂರಾಗಲಿದ್ದಾರೆ. ಸಿಎಂ ಇಬ್ರಾಹಿಂ ಜೆಡಿಎಸ್ ಸೇರಲ್ಲ, ಕಾಂಗ್ರೆಸ್ ಬಿಡಲ್ಲ. ನಮ್ಮಿಬ್ಬರ ಮಧ್ಯೆ ತುಂಬಾ ಸ್ನೇಹ ಇದೆ. ಹಾಗಾಗಿ ಇಬ್ರಾಹಿಂ ನನ್ನ ಬಗ್ಗೆ ಮಾತಾಡ್ತಾರೆ. ಮುಸಲ್ಮಾನರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸಮಯ ಬಂದಾಗ ಮಾಡ್ತೀವಿ. ಗುಲಾಮ್ ನಬಿ ಆಜಾದ್, ಅಹಮದ್ ಪಟೇಲ್ ಅವರೆಲ್ಲ ಕಾಂಗ್ರೆಸ್ನಲ್ಲಿ ಉನ್ನತ ಸ್ಥಾನದಲ್ಲಿ ಇರಲಿಲ್ವೇ? ರಾಜಕಾರಣ ನಿಂತ ನೀರಲ್ಲ. ಬರುವವರು ಬರ್ತಿರ್ತಾರೆ, ಹೋಗುವವರು ಹೋಗ್ತಿರ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಕ್ಕೆ ಉತ್ತರವಿಲ್ಲ
ಇವತ್ತು ಎಪಿಎಂಸಿ ಬಂದ್ ವಿಚಾರದ ಬಗ್ಗೆ ಪತ್ರ ಬರೆದು ಏನ್ ಹೇಳಬೇಕು ಅದನ್ನು ಹೇಳ್ತೀನಿ. ಸರ್ಕಾರಕ್ಕೆ ಒಳ್ಳೆಯ ಅಭ್ಯಾಸ ಇಲ್ಲ, ಬರೀ ಕೆಟ್ಟ ಅಭ್ಯಾಸ ಇದೆ. ಮೂರು ಪತ್ರ ಬರೆದೆ, ಯಾವುದಕ್ಕೂ ಉತ್ತರ ಇಲ್ಲ. ಸರ್ಕಾರ ಖಾಸಗಿ ಶಾಲೆ ಜೊತೆ ಶಾಮೀಲಾಗಿದೆ. ಒಬ್ಬ ಟೀಚರ್ ಇಟ್ಟು ಆನ್ಲೈನ್ ಕ್ಲಾಸ್ ಮಾಡಿದ್ದಾರೆ. ಆದ್ರೆ ಪೂರ್ಣ ಶುಲ್ಕ ಕಟ್ಟಿ ಅಂತ ಶಾಲೆಗಳು ಒತ್ತಾಯಿಸುತ್ತಿವೆ. ಇದನ್ನು ಬಗೆಹರಿಸುವವರು ಯಾರು? ಸರ್ಕಾರ ಇದರಲ್ಲಿ ಶಾಮೀಲಾಗಿದೆ. ಹೀಗಾಗಿ ಪೋಷಕರು ಪ್ರತಿಭಟನೆ ಮಾಡ್ತಾ ಇದ್ದಾರೆ. ಕಾರ್ಮಿಕರು ಕೂಡ ಪ್ರತಿಭಟನೆ ಮಾಡ್ತಾ ಇದ್ದಾರೆ. ಅದನ್ನು ಸರ್ಕಾರ ಬಗೆಹರಿಸಿಲ್ಲ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ನಿಂದ ಬಿಜೆಪಿಗೆ ಬೆಂಬಲ
ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದೂ ಆಯಿತು. ರೈತ ವಿರೋಧಿ ಕಾನೂನುಗಳಿಗೆ ಬೆಂಬಲ ಕೂಡ ಕೊಟ್ರು. ಸಭಾಪತಿ ತೆಗೆಯಲು ಸಪೋರ್ಟ್ ಮಾಡ್ತಿದ್ದಾರೆ. ಹೀಗಾಗಿ ನಾನು ಬಿಜೆಪಿ B ಟೀಮ್ ಜೆಡಿಎಸ್ ಅಂತ ಹೇಳಿದ್ದೆ. ಅದಕ್ಕೆ ನನ್ನ ಮೇಲೆ ಮುಗಿಬಿದ್ದಿದ್ರು. ಈಗ ಅದು ಸಾಬೀತಾಗಿದೆ ಎಂದರು.