ಬೆಂಗಳೂರು: ಕ್ರೈಸ್ತ ಸಮುದಾಯದ ನಿಯೋಗವು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಂತೆ ಮನವಿ ಮಾಡಿತು. ರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗ ಭೇಟಿ ಮಾಡಿ, ಕರ್ನಾಟಕದಲ್ಲಿನ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿತು. ಹಾಗೆಯೇ ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆಯೂ ಪರಾಮರ್ಶಿಸುವಂತೆ ಮನವಿ ಮಾಡಿತು.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ಅನುಪಾತ ಕಡಿಮೆಯಾಗಿದೆ. ಹಾಗಿದ್ದರೂ ನಾವೂ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದೇವೆ ಅಂತಾ ಬಿಂಬಿಸಲಾಗುತ್ತಿದೆ. ಈ ರೀತಿ ಬಿಂಬಿಸುವುದು ಸರಿಯಲ್ಲ. ಸಮಾಜದಲ್ಲಿ ನಾವೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಿ. ಮೊದಲು ನಮ್ಮ ಮೇಲೆ ಆಗುತ್ತಿರುವ ದಾಳಿ ತಪ್ಪಿಸಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ರೊನಾಲ್ಡ್ ಕೊಲಾಸೊ ತಿಳಿಸಿದರು.
ನಿಯೋಗದಲ್ಲಿ ಬಿ.ಎಲ್.ಶಂಕರ್, ಮಾಜಿ ಎಂಎಲ್ಸಿ ಐವಾನ್ ಡಿಸೋಜಾ, ಕಾಂಗ್ರೆಸ್ ನಾಯಕ ರಾಧಾಕೃಷ್ಣ, ಎನ್ಆರ್ಐ ಉಪಾಧ್ಯಕ್ಷ ಆರತಿ ಕೃಷ್ಟ ಉಪಸ್ಥಿತರಿದ್ದರು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಕ್ರೈಸ್ತ ಸಮುದಾಯ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ: ಮಂಗಳೂರಿನ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣ..ಮತಾಂತರ ಆರೋಪದಡಿ ಮಹಿಳೆ ಬಂಧನ