ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳು ಸ್ಫೋಟಗೊಳ್ಳುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ.
ಒಳಜಗಳದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳುವ ಹಂತ ತಲುಪಿದರೆ, ಬಿಜೆಪಿಯ ಅತೃಪ್ತ ಶಾಸಕರನ್ನ ಸೆಳೆದು ಮತ್ತೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚಿಸಲು ಸಾಧ್ಯವೇ ಎನ್ನುವ ಲೆಕ್ಕಾಚಾರ ಹಾಕತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಮಾದರಿಯಲ್ಲಿಯೇ ಕಮಲ ಶಾಸಕರನ್ನ ಸೆಳೆಯುವ ಕಾರ್ಯಾಚರಣೆ "ಆಪರೇಷನ್ ಹಸ್ತ"ಕ್ಕೆ ರಹಸ್ಯವಾಗಿ ಡಿಕೆಶಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆಂದು ಹೇಳಲಾಗಿದೆ.
ಡಿಕೆಶಿ ತಂತ್ರಗಾರಿಕೆ: ಬಿಜೆಪಿಯ ಬಂಡಾಯ ಶಾಸಕರಿಗೆ ಡಿಕೆಶಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಬಂಡಾಯ ಚಟುವಟಿಕೆಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪತನಗೊಂಡು ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ, ಮಧ್ಯಂತರ ಚುನಾವಣೆ ಎದುರಾಗುವ ಪರಿಸ್ಥಿತಿ ನಿರ್ಮಾಣವಾದರೆ, ಈ ಸಂದರ್ಭವನ್ನು ಬಳಸಿಕೊಂಡು ಮತ್ತೆ ಕಾಂಗ್ರೆಸ್ ನೇತೃತ್ವದ ದೋಸ್ತಿ ಸರ್ಕಾರ ರಚಿಸಬೇಕು. ಆ ಮೂಲಕ ತಾವು ಮುಖ್ಯಮಂತ್ರಿಯಾಗಬೇಕು ಎನ್ನುವ ತಂತ್ರಗಾರಿಕೆಯನ್ನ ಡಿಕೆಶಿ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ.
ರಹಸ್ಯ ಮಾತುಕತೆ: ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್-ಜೆಡಿಎಸ್ನ 17 ಶಾಸಕರನ್ನ ಸೆಳೆದಂತೆ ತಾವೂ ಸಹ ಬಿಜೆಪಿಯ 20ಕ್ಕೂ ಹೆಚ್ಚು ಬಂಡಾಯ ಶಾಸಕರನ್ನ ಸೆಳೆದು ಉಪಚುನಾವಣೆ ಎದುರಿಸಬಹುದಾ..? ಎನ್ನುವ ಬೆಳವಣಿಗೆಗಳ ಸಾಧ್ಯಾ-ಸಾಧ್ಯತೆಗಳ ಬಗ್ಗೆ ಡಿಕಿಶಿ ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಕಮಲ ಪಾಳಯದ ಬಂಡಾಯ ಶಾಸಕರನ್ನು ಸೆಳೆಯುವ ಸಂಬಂಧ ಈಗಾಗಲೇ ಡಿ.ಕೆ.ಶಿವಕುಮಾರ್ ಬಿಜೆಪಿಯಲ್ಲಿನ ತಮ್ಮ ಆಪ್ತ ಶಾಸಕರು ಮತ್ತು ಸಚಿವರ ಜತೆ ಹಲವು ಸುತ್ತಿನ ಸಮಾಲೋಚನೆ ಸಹ ನಡೆಸಿದ್ದಾರೆನ್ನಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಅತೃಪ್ತ ಸಚಿವರು ಮತ್ತು ಮಂತ್ರಿ ಸ್ಥಾನ ದೊರೆಯದ ಬಂಡಾಯ ಶಾಸಕರ ಪಟ್ಟಿಯನ್ನ ಡಿಕೆಶಿ ಸಿದ್ಧಪಡಿಸಿದ್ದು, ಕೆಲವರ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸುಲಭದ ಮಾತಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಂಡವರು. ಬಿಜೆಪಿಯ ಬಂಡಾಯವನ್ನೇ ಉಪಯೋಗಿಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪತನಗೊಂಡರೆ ಆಪರೇಷನ್ ಹಸ್ತದ ರಾಜಕೀಯ ದಾಳ ಉರುಳಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ, ವಾಸ್ತವವಾಗಿ ಇದು ಅಷ್ಟು ಸುಲಭದ ಮಾತಲ್ಲ. ಬಿಜೆಪಿ ಸರ್ಕಾರ ಕೆಡವಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚಿಸಬೇಕೆಂದರೆ ಬಿಜೆಪಿಯಿಂದ ಸುಮಾರು 25 ಶಾಸಕರನ್ನು ಸೆಳೆಯಬೇಕಾಗುತ್ತದೆ. ಅವರೆಲ್ಲರೂ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕಾಗುತ್ತದೆ. ನಂತರ ಉಪ ಚುನಾವಣೆ ಎದುರಿಸಿ ಗೆದ್ದು ಬರಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನ ಊಹಿಸುವುದೂ ಕಷ್ಟ.
ಕಾಕತಾಳೀಯ: ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವ ಮಾತನ್ನ ನಂಬುವುದಾದರೆ, ಈ ವಿದ್ಯಮಾನ ನಡೆದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ಶಾಸಕರ ಪಕ್ಷಾಂತರ ಚಟುವಟಿಕೆಗಳು ನಡೆದು ಆಡಳಿತಾರೂಢ ಸರ್ಕಾರವನ್ನು ಕೆಡವಿ ಮತ್ತೊಂದು ಸರ್ಕಾರ ರಚಿಸಲು ಅವಕಾಶ ನೀಡುವ ಶಾಸಕರ ಪಕ್ಷಾಂತರ ಚಟುವಟಿಕೆ ತಡೆಯುವ ಉದ್ದೇಶದಿಂದ ವಿಧಾನಸಭೆ ಅಧ್ಯಕ್ಷ ಕಾಗೇರಿ ಅವರು ಈಗ ಪಕ್ಷಾಂತರ ನಿಷೇಧ ಕಾಯ್ದೆಗೆ ಮತ್ತಷ್ಟು ಬಲ ತುಂಬುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಕಾಕತಾಳೀಯ ಎನ್ನುವಂತೆ ರಾಜ್ಯದಲ್ಲಿ ದಿಢೀರ್ನೆ ಬಂಡಾಯದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.