ಆನೇಕಲ್/ಬೆಂಗಳೂರು: ತಾಲೂಕಿನಲ್ಲಿ ಬೆಳಗ್ಗೆಯಿಂದಲೇ ಜೆಸಿಬಿಗಳು ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆರ್ಭಟಿಸಿವೆ. ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕಿನ 11 ಕೆರೆಗಳ ಒತ್ತುವರಿಯನ್ನು ಆಯಾ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.
ಕೆರೆ ಒತ್ತವರಿ ತೆರವು ಒಂದೆಡೆಯಾದರೆ, ಮತ್ತೊಂದೆಡೆ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಸಿಟಿ ಪಕ್ಕದ ಹುಲಿಮಂಗಲ ಸರ್ವೆ ನಂ 155-156ರ 5 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ತೆರವುಗೊಳಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಶಿವಪ್ಪ, ತಹಶೀಲ್ದಾರ್ ಪಿ.ದಿನೇಶ್ ನೇತೃತ್ವದಲ್ಲಿ ಸರ್ವೆ ಅಧಿಕಾರಿಗಳು, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಹಾಗು ಪೊಲೀಸರ ಸುಪರ್ದಿಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹುಲಿಮಂಗಲದ ಸರ್ವೆ ನಂ 156ರ 5 ಎಕರೆ ಜಾಗದಲ್ಲಿ 0.16 ಗುಂಟೆ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದವರು ತಹಶೀಲ್ದಾರರ ದಿಢೀರ್ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ. ಒಟ್ಟು 15 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೊಳಿಸಿದ್ದಾರೆ. ಅಲ್ಲದೇ ವಾಣಿಜ್ಯಕ್ಕೆ ಬಳಿಸಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚಿದವರ ಮೇಲೆ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್ ಪಿ.ದಿನೇಶ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಶನಿವಾರ ಮೊದಲ ಹಾಗೂ ಕೊನೆಯ ಶನಿವಾರದಂದು ರಾಜಕಾಲುವೆ, ಗೋಮಾಳ, ಕೆರೆಯಂಗಳಗಳ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡುವುದಾಗಿ ಅವರು ಮಾಹಿತಿ ನೀಡಿದರು. ಒಟ್ಟು ಹುಲಿಮಂಗಲ ಸರ್ವೆ ನಂನಲ್ಲಿ 600 ಎಕರೆ ಗೋಮಾಳವಿದ್ದು, ಆಗಿಂದಾಗೆ ಕೆಲವರಿಗೆ ಸರ್ಕಾರದಿಂದ ಮಂಜೂರಾದ ಜಮೀನು ಇದೆ. ಆದರೆ, ಅವುಗಳಲ್ಲಿ ಬಹುಪಾಲು ನಕಲಿ ದಾಖಲಾತಿಗಳು ಸೃಷ್ಟಿಸಿ ವಾಣಿಜ್ಯ ವಸತಿ ಸಮುಚ್ಚಯಗಳಿಂದ ಕೋಟ್ಯಂತರ ರೂ ಗಳಿಕೆ ಎಗ್ಗಿಲ್ಲದೇ ಭೂಕಬಳಿಕೆದಾರರಿಂದ ನಡೆದಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಕೆಲ ಸಮುಚ್ಚಯಗಳು ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ತೀರ್ಮಾನಕ್ಕಾಗಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.