ಬೆಂಗಳೂರು: ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ಮೇಲ್ಮನೆಯಲ್ಲೂ ಆಪರೇಷನ್ಗೆ ಕೈ ಹಾಕಿದೆ. ಜೆಡಿಎಸ್ನ ಹಿರಿಯ ಮುಖಂಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ವಿಧಾನ ಪರಿಷತ್ತಿಗೆ ಜೆಡಿಎಸ್ ಮತ್ತು ಜನತಾ ಪರಿವಾರದಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತ 7 ಬಾರಿ ಗೆದ್ದ ದಾಖಲೆಯ ಸಾಧನೆಯನ್ನು ಹೊರಟ್ಟಿ ಹೊಂದಿದ್ದಾರೆ. ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ಸಮುದಾಯದ ಮುಖಂಡರಾದ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರನ್ನು ಕಮಲಕ್ಕೆ ಸೆಳೆಯುವ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗು ಉತ್ತರ ಕರ್ನಾಟಕದಲ್ಲಿ ತನ್ನ ನೆಲೆ ಮತ್ತಷ್ಟು ಭದ್ರಪಡಿಸಿಕೊಳ್ಳಲು ಯಶಸ್ವಿಯಾಗಿದೆ.
ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರುತ್ತಿರುವ ಬಗ್ಗೆ ‘ಈ ಟಿವಿ ಭಾರತ’ ಜತೆ ಮಾತನಾಡಿದ ಹೊರಟ್ಟಿ, ನಾಲ್ಕು ದಶಕಗಳ ಕಾಲ ಜನತಾ ಪರಿವಾರದಲ್ಲಿದ್ದು ಜಾತ್ಯಾತೀತ ಜನತಾದಳ ತೊರೆಯುತ್ತಿರುವುದರ ಬಗ್ಗೆ ಬಹಳ ನೋವಿದೆ. ಆದರೆ ಮುಂದಿನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳಕ್ಕೆ ಹೆಚ್ಚಿನ ನೆಲೆ ಇಲ್ಲದಿದ್ದರೂ ಬಸವರಾಜ ಹೊರಟ್ಟಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ 7 ಬಾರಿ ಗೆದ್ದು ಮೇಲ್ಮನೆ ಇತಿಹಾಸದಲ್ಲಿ ಸೋಲಿಲ್ಲದ ಸರದಾರ ಎಂದು ಹೆಸರುವಾಸಿಯಾಗಿದ್ದಾರೆ. ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳೆರಡೂ ಹೊರಟ್ಟಿಯವರನ್ನು ಮೇಲ್ಮನೆ ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನಿಸಿ ವಿಫಲವಾಗಿವೆ.
ಇದನ್ನೂ ಓದಿ: ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಬಸವರಾಜ ಹೊರಟ್ಟಿ
ಮುಂದಿನ ತಿಂಗಳು ಜೂನ್ನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಮೇ ತಿಂಗಳ ಎರಡನೇ ವಾರ ಕೇಂದ್ರ ಚುನಾವಣೆ ಆಯೋಗ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಚುನಾವಣೆ ಹಿನ್ನೆಲೆಯಲ್ಲಿಯೇ ಈ ಬೆಳವಣಿಗೆ ನಡೆದಿದೆ. ಮೇಲ್ಮನೆಯಲ್ಲಿ ಬಸವರಾಜ ಹೊರಟ್ಟಿ ಸಭಾಪತಿಯಾಗಲು ಬೆಂಬಲ ನೀಡಿದ್ದ ಬಿಜೆಪಿ ಮುಂದಿನ ಅವಧಿಗೆ ಹೊರಟ್ಟಿಯವರಿಗೆ ಬೆಂಬಲಿಸಲು ಆಸಕ್ತಿ ತೋರಲಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಹೊರಟ್ಟಿಯವರಿಗೆ ರವಾನಿಸಿದ ಬಿಜೆಪಿ ನಾಯಕರು ಜೆಡಿಎಸ್ ತೊರೆದು ಬಿಜೆಪಿಯನ್ನೇ ಸೇರುವಂತೆ ಆಫರ್ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಹಿರಿಯ ಸಚಿವ ಆರ್.ಅಶೋಕ್ ಬಿಜೆಪಿ ಸೇರಿ ಚುನಾವಣೆಯಲ್ಲಿ ಗೆದ್ದರೆ ಮೇಲ್ಮನೆಯ ಸಭಾಪತಿ ಹುದ್ದೆ ನೀಡಬಹುದೆನ್ನುವ ಆಫರ್ ಮುಂದಿಟ್ಟು ಹೊರಟ್ಟಿಯವರನ್ನು ಆಪರೇಷನ್ ಕಮಲದ ಬಲೆಗೆ ಬೀಳಿಸಲಾಗಿದೆ.
ಟಿಕೆಟ್ ಘೋಷಿಸದ ಬಿಜೆಪಿ: ಜೆಡಿಎಸ್ ತೊರೆದು ಬಸವರಾಜ ಹೊರಟ್ಟಿ ಬಿಜೆಪಿಗೆ ಬಂದೇ ಬರುತ್ತಾರೆ. ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎನ್ನುವ ಸ್ಪಷ್ಟ ರಾಜಕೀಯ ಲೆಕ್ಕಾಚಾರ ಹೊಂದಿದ್ದ ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಘೋಷಿಸದೇ ಮೌನವಾಗಿತ್ತು. ಜೂನ್ ತಿಂಗಳಲ್ಲಿ ನಡೆಯುವ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೊರಟ್ಟಿ ಪ್ರತಿನಿಧಿಸುವ ಪಶ್ಚಿಮ ಶಿಕ್ಷಕರ ಕ್ಷೇತ್ರ ಮಾತ್ರ ಹೊರತುಪಡಿಸಿ ಉಳಿದ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿತ್ತು.
ಬೆಂಗಳೂರಿಗೆ ಮೊನ್ನೆ ಕೇಂದ್ರ ಗೃಹ ಸಷಿವ ಅಮಿತ್ ಶಾ ಆಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿ ಬಿಜೆಪಿ ಸೇರುವ ಇಂಗಿತವನ್ನು ಹೊರಟ್ಟಿ ವ್ಯಕ್ತಪಡಿಸಿದ್ದರು. ಈ ತಿಂಗಳ 11 ರಂದು ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ಹಾಗು ಜೆಡಿಎಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲದ ಚಿಹ್ನೆ ಹಿಡಿಯಲಿದ್ದಾರೆ.