ಬೆಂಗಳೂರು: ಕೊರೊನಾ ಬಂದ ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಯಿತು. ಮೊದ ಮೊದಲು ಬೆರಳೆಣಿಕೆಯಷ್ಟಿದ್ದ ಸೋಂಕಿತರ ಸಂಖ್ಯೆ ದಿನಗಳು ಉರುಳಿದಂತೆ ಅಧಿಕವಾಗಿದೆ. ಜನರ ನಿರ್ಲಕ್ಷ್ಯ, ಜಾಗೃತಿ ಕೊರತೆಯಿಂದಾಗಿ ನಗರದಲ್ಲಿದ್ದ ಸೋಂಕು ಗಲ್ಲಿಯಿಂದ ಪುಟ್ಟ ಹಳ್ಳಿಗಳಿಗೂ ಹಬ್ಬಿದೆ. ಇದರಿಂದಾಗಿ ಇಡೀ ಸರ್ಕಾರಿ ಆಸ್ಪತ್ರೆ-ವೈದ್ಯಕೀಯ ಕಾಲೇಜು-ಸಂಸ್ಥೆಗಳು ಜೊತೆಗೆ ಖಾಸಗಿ ಆಸ್ಪತ್ರೆಗಳು ಸಹ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾದವು.
ಕೊರೊನಾ ಇನ್ನೇನು ನಿಯಂತ್ರಣಕ್ಕೆ ಬಂತು ಎಂದು ನಿಟ್ಟುಸಿರು ಬಿಡುವಾಗಲೇ ದಿಢೀರ್ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಆಗ ಮತ್ತೆ ಲಾಕ್ಡೌನ್ ಜಾರಿ ಮಾಡಲಾಯಿತು. ಇತ್ತ ಸ್ಪೆಷಾಲಿಟಿ ಆಸ್ಪತ್ರೆ, ದೊಡ್ಡ ಆಸ್ಪತ್ರೆಗಳಲ್ಲೆವು ತುರ್ತು ಸೇವೆ ಹೊರತುಪಡಿಸಿ ಹೊರ ರೋಗಿಗಳ ಸೇವೆ ನಿಲ್ಲಿಸಿದ್ದವು. ಅದ್ಯಾವಾಗ ಲಾಕ್ಡೌನ್ ಹಾಗೂ ಇತರೆ ಕೋವಿಡ್ ಕ್ರಮ ಕೈಗೊಂಡರೂ ನಿಯಂತ್ರಣವಾಗಲ್ಲ ಎಂದು ತಿಳಿದ ಮೇಲೆ ಅನ್ಲಾಕ್ ಜಾರಿ ಮಾಡಲಾಯಿತು.
ಬಳಿಕ ನಿಧಾನವಾಗಿ ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಿದ್ದ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರವು ಮಾಡಲಾಯಿತು. ಜೊತೆಗೆ ಒಪಿಡಿ ಸೇವೆಯನ್ನು ಆರಂಭಿಸಲಾಗಿದೆ. ದೀರ್ಘ ಕಾಲದ ರೋಗ ಲಕ್ಷಣವಿರುವವರು ಇದೀಗ ಆಸ್ಪತ್ರೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಲಾಕ್ಡೌನ್ ಹಾಗೂ ಆನ್ಲಾಕ್ ನಂತರ ಆಸ್ಪತ್ರೆಗಳಲ್ಲಿ ಒಪಿಡಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ.
ಕೋವಿಡ್ ಪರೀಕ್ಷೆ ಮಾಡಿದ್ದರಷ್ಟೇ ಒಪಿಡಿ ಸೇವೆ: ನಗರದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದರೆ ಮೊದಲಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಲೇಬೇಕು. ಸರ್ಕಾರಿ ಹಾಗೂ ಪಾಲಿಕೆ ಆಸ್ಪತ್ರೆಗಳಿಗೆ ಹೋಗಿ ವೈದ್ಯರನ್ನು ಭೇಟಿಯಾದರೂ ಅಲ್ಲಿಯೂ ಕೊರೊನಾ ಪರೀಕ್ಷೆ ನಂತರವೇ ರೋಗಕ್ಕೆ ಚಿಕಿತ್ಸೆ. ಒಂದು ವೇಳೆ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತದೆ. ಆದರೆ ಅನಾರೋಗ್ಯ ಸಮಸ್ಯೆ ಇದ್ದಾಗ ವರದಿ ಬರುವುದು ತಡವಾದರೆ ರೋಗಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಮಸ್ಯೆಗಳೇ ಹೆಚ್ಚಾಗುತ್ತಿವೆ.
ಅದರಲ್ಲೂ ಫಾಲೋ ಅಪ್ ಟ್ರೀಟ್ಮೆಂಟ್ ರೋಗಿಗಳಿಗೆ ಇದರಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ಅಂದರೆ ದೀರ್ಘ ಕಾಲದ ರೋಗಗಳಾದ ಶುಗರ್, ಬಿಪಿ, ಕೊಲೆಸ್ಟ್ರಾಲ್, ಅಸ್ತಮಾ, ಕ್ಯಾನ್ಸರ್ ರೋಗಿಗಳಿಗೆ ಮಾಡುವ ಕಿಮೋಥೆರಪಿ, ರೇಡಿಯೋ ಥೆರಪಿ ಇದೆಲ್ಲವೂ ಪ್ರತೀ ತಿಂಗಳು ಮಾಡಿಸುವ ಅಗತ್ಯವಿದೆ. ಇವರೆಲ್ಲರೂ ವರದಿ ಬರುವವರೆಗೂ ಕಾದು ನಂತರ ಚಿಕಿತ್ಸೆ ಪಡೆಯಬೇಕೆಂದರೆ ಕೊಂಚ ಸಮಸ್ಯೆಯಾಗುತ್ತಿದೆ. ಇತ್ತ ಕಣ್ಣು, ದಂತ ಚಿಕಿತ್ಸೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆಯೂ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಹೇಗಿದೆ ಪರಿಸ್ಥಿತಿ?: ಕೋವಿಡೇತರ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಆಸ್ಪತ್ರೆಗೆ ಹೋದರೆ ಎಲ್ಲಿ ಕೋವಿಡ್ ನಮಗೂ ತಗುಲುತ್ತದೆಯೋ ಎಂಬ ಭಯ ಇದೆ. ಹೀಗಾಗಿ ಕೋವಿಡೇತರ ರೋಗಿಗಳಿಗೆ ಸರಿಯಾದ ರೀತಿ ಉಪಚರಿಸಲು ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಬಿ. ಶೆಟ್ಟಿ.
ಹೊರ ರೋಗಿ ವಿಭಾಗಕ್ಕೆ ಬರುವ ರೋಗಿಗಳಿಗೆ ಸ್ಕ್ರೀನಿಂಗ್ ಮಾಡಲಾಗುತ್ತದೆ. ಒಂದು ವೇಳೆ ಒಳ ರೋಗಿಯಾಗಬೇಕಾದ ಅನಿರ್ವಾಯ ಸೃಷ್ಟಿಯಾದರೆ ಅಂತಹವರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು. ಇನ್ನು ಆಸ್ಪತ್ರೆಯಲ್ಲಿ ವಿಭಾಗಗಳನ್ನು ಮಾಡಿದ್ದು, ಕೋವಿಡ್-ಕೋವಿಡೇತರರು ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಲಾಗಿದೆ.
ಆಸ್ಪತ್ರೆಗೆ ಬರಲಾಗದವರಿಗೆ ವಿಡಿಯೋ ಕನ್ಸಲ್ಟೇಷನ್: ಕೋವಿಡ್ ಭೀತಿಗೆ ಹೆದರಿ ಆಸ್ಪತ್ರೆಗೆ ಬರಲಾಗದವರಿಗೆ ಹಾಗೂ ಶಸ್ತ್ರಚಿಕಿತ್ಸೆ ನಂತರ ಮತ್ತೆ ಆಸ್ಪತ್ರೆಗೆ ಭೇಟಿ ಮಾಡಲಾಗದವರಿಗೆ ವಿಡಿಯೋ ಕನ್ಸಲ್ಟೇಷನ್ ಮಾಡಲಾಗುತ್ತಿದೆ. ಜೊತೆಗೆ ಹೋಮ್ ವಿಸಿಟ್ (ರೋಗಿ ಮನೆಗೆ ಭೇಟಿ) ಕೂಡ ಸಕ್ರಾ ಆಸ್ಪತ್ರೆ ವೈದ್ಯರು ಮಾಡುತ್ತಿದ್ದಾರೆ. ಒಟ್ಟಾರೆ ಕೊರೊನಾ ಕಾರಣದಿಂದ ಒಪಿಡಿ ಸೇವೆ ಆರಂಭವಾಗಿದ್ದರೂ ಜನರಿಲ್ಲದೆ ಆಸ್ಪತ್ರೆಗಳು ಭಣಗುಡುತ್ತಿವೆ. ಜೊತೆಗೆ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಆಸ್ಪತ್ರೆಗಳು ಮಾಡಿಕೊಂಡಿವೆ.
ಕೊಪ್ಪಳ ವರದಿ: ಜಿಲ್ಲೆಯಲ್ಲಿ ಸುಮಾರು 270ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಿದ್ದು, ಕೊರೊನಾ ಭಯದಿಂದ ಬಹುಪಾಲು ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳ ಸಂಖ್ಯೆ ವಿರಳವಾಗಿಗಿದೆ. ಕಾಯಿಲೆಗಳೇನು ಕಡಿಮೆಯಾಗಿಲ್ಲ. ಆದರೆ, ಚಿಕಿತ್ಸೆಗೆ ಹೋದರೆ, ಸೋಂಕು ತಗುಲುತ್ತದೆಯೋ ಎಂಬ ಆತಂಕ ಜನರಲ್ಲಿ ಆಳವಾಗಿ ಬೇರೂರಿದೆ.
ಅಲ್ಲದೆ, ಬೇರೆ ಬೇರೆ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಈ ಮೊದಲು ಹೊರ ರೋಗಿಗಳ ವಿಭಾಗದಲ್ಲಿ 100 ಮಂದಿಗೆ ತಪಾಸಣೆ ಮಾಡುತ್ತಿದ್ದ ಆಸ್ಪತ್ರೆಗಳಲ್ಲಿ ಈಗ 50ಕ್ಕೆ ಇಳಿದಿದೆ. ಇನ್ನೂ ಕೆಲವರು ಆನ್ಲೈನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ತಿರವಿರುವ ಮತ್ತು ಕೈಗಟುಕುವ ದರದಲ್ಲಿ ಚಿಕಿತ್ಸೆ ನೀಡುವ ಬೆರಣಿಕೆಯಷ್ಟು ಕ್ಲಿನಿಕ್ಗಳಿಗೆ ಗ್ರಾಮೀಣ ಪ್ರದೇಶದ ಬಹುಪಾಲು ಜನರು ಚಿಕಿತ್ಸೆ ಪಡೆಯುತ್ತಿಯುತ್ತಿದ್ದಾರೆ ಎನ್ನುತ್ತಾರೆ ಕೊಪ್ಪಳದ ಕೆ.ಎಸ್.ಆಸ್ಪತ್ರೆ ತಜ್ಞ ವೈದ್ಯ ಡಾ.ಕೆ.ಬಸವರಾಜು.
ಯಾದಗಿರಿ ವರದಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಸರಿಯಾದ ಚಿಕಿತ್ಸೆ ಇಲ್ಲದೆ ರೋಗಿಗಳು ನರಕ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಸಲಕರಣೆಗಳು ಮತ್ತು ಹಾಸಿಗೆಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸೋಂಕಿತರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನು ಸಾಮಾನ್ಯ ರೋಗಿಗಳಿಗೆ ಉತ್ತಮ ಚಿಕಿತ್ಸೆಯ ಮಾತೆಲ್ಲಿ ಎನ್ನುತ್ತಿದ್ದಾರೆ ಜನರು. ಕೋವಿಡ್ ಭೀತಿಯಿಂದಾಗಿ ಹೊರ ರೋಗಿಗಳ ವಿಭಾಗಕ್ಕೆ ಕೋವಿಡೇತರ ರೋಗಿಗಳು ಬರುವುದೇ ಅಪರೂಪವಾಗಿದೆ. ಸ್ಪತ್ರೆಗೆ ಹೋದರೆ ಎಲ್ಲಿ ಕೋವಿಡ್ ನಮಗೂ ತಗುಲುತ್ತದೆಯೋ ಎಂಬ ಭಯ ಮತ್ತು ಕೊರೊನಾ ಪರೀಕ್ಷೆ ನಂತರವೇ ಬೇರೆ ರೋಗಕ್ಕೆ ಚಿಕಿತ್ಸೆ ಪಡೆಯಬೇಕಾದ ಕಾರಣ ಜನರು ಆಸ್ಪತ್ರೆಗಳತ್ತ ಹಿಂದೇಟು ಹಾಕುತ್ತಿದ್ದಾರೆ.