ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿ ವಂಚಿಸುತ್ತಿದ್ದ ಆರೋಪಿಯನ್ನ ಹೆಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕನಕಪುರ ಮೂಲದ ಪೃಥ್ವಿ (34) ಬಂಧಿತ ಆರೋಪಿ.
ಮದುವೆ ಆಗಿ ಮಗುವಿದ್ದರೂ, ಯುವತಿಯರ ಸಹವಾಸ, ಜೂಜಿನ ಶೋಕಿಗೆ ಬಿದ್ದಿದ್ದ ಈತ ಫೇಸ್‌ಬುಕ್‌ನಲ್ಲಿ ಅಂದವಾದ ಪ್ರೊಫೈಲ್ ಫೋಟೋ ಹಾಕಿ ಅಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಎರಡ್ಮೂರು ತಿಂಗಳು ಚಾಟಿಂಗ್ ಮಾಡಿ ಸ್ನೇಹ ಬೆಳೆಸಿ ಆತ್ಮೀಯನಾಗುತ್ತಿದ್ದ. ಬಳಿಕ ಅಮ್ಮನಿಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬುದಾಗಿ ಹೇಳಿ ಫೇಸ್‌ಬುಕ್ ಸ್ನೇಹಿತರಿಂದ ಕಾರು ಪಡೆಯುತ್ತಿದ್ದ. ಬಳಿಕ ಅದೇ ಕಾರನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ.
ಮತ್ತೊಂದು ಕಡೆ ಒಎಲ್‌ಎಕ್ಸ್ ಮೂಲಕವೂ ವಂಚಿಸುತ್ತಿದ್ದ ಆರೋಪಿ ಕಾರು, ಕ್ಯಾಮರಾಗಳನ್ನ ಬಾಡಿಗೆಗೆ ಪಡೆದು ಹಿಂತಿರುಗಿಸದೇ ಇತರರಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಯುವತಿಯರ ಸಹವಾಸ, ಜೂಜಾಡುವ ಮೂಲಕ ಮೋಜು ಮಸ್ತಿ ಮಾಡುತ್ತಿದ್ದ.
ಪದೇ ಪದೆ ಸಿಮ್‌ಕಾರ್ಡ್ ಬದಲಾಯಿಸುತ್ತ ಪೊಲೀಸರಿಗೆ ಆಟವಾಡಿಸುತ್ತಿದ್ದ ಆರೋಪಿಯನ್ನ ಹೆಚ್ಎಎಲ್ ಠಾಣಾ ಪೊಲೀಸರ ತಂಡ ಎರಡು ತಿಂಗಳ ನಿರಂತರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 8 ಕಾರು ಹಾಗೂ ಕ್ಯಾಮರಾಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಪರಿಹಾರದ ಹಣ ನೀಡಲು 5 ಲಕ್ಷ ಲಂಚ: ಎಸಿಬಿ ಬಲೆಗೆ ಬಿದ್ದ ಇಂಜಿನಿಯರ್