ಬೆಂಗಳೂರು: ನಗರದಲ್ಲಿ ಮತ್ತೊಂದು ಆ್ಯಸಿಡ್ ದಾಳಿ ನಡೆದಿದ್ದು, ನಗರ ಬೆಚ್ಚಿಬಿದ್ದಿದೆ. ಪರಿಚಯಸ್ಥನಿಂದಲೇ ಮಹಿಳೆ ಮೇಲೆ ಈ ದಾಳಿ ನಡೆದಿದೆ ಎಂಬುದಾಗಿ ತಿಳಿದು ಬಂದಿದೆ. ಕುಮಾರಸ್ವಾಮಿ ಲೇಔಟ್ನಿಂದ ಜೆ.ಪಿ.ನಗರಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಪರಿಚಯಸ್ಥನಾಗಿದ್ದ ಗೋರಿಪಾಳ್ಯದ ಅಹ್ಮದ್ ಎಂಬಾತ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಸಂತ್ರಸ್ತೆ ಮತ್ತು ಅಹ್ಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು. ಆದರೆ, ಈ ಮೊದಲೇ ಸಂತ್ರಸ್ತೆಗೆ ಮದುವೆಯಾಗಿ ಮಗಳು ಸಹ ಇದ್ದಾಳೆ. ಮರು ಮದುವೆಯಾಗಲು ಮಹಿಳೆ ಅಹ್ಮದ್ಗೆ ಕಾಲಾವಕಾಶ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ಆರೋಪಿ ಅಹ್ಮದ್ ತಕ್ಷಣ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾನೆ. ಇದೇ ವಿಚಾರವಾಗಿ ಪದೇ ಪದೆ ಇಬ್ಬರ ಮಧ್ಯೆ ಗಲಾಟೆ ಕೂಡಾ ನಡೆದಿತ್ತಂತೆ.
ಓದಿ: ಬೆಂಗಳೂರಿನಲ್ಲಿ ಮತ್ತೊಂದು ಘೋರ ಕೃತ್ಯ; ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ
ಇಂದು ಬೆಳಗ್ಗೆ ಕೆ.ಎಸ್ ಲೇಔಟ್ನಿಂದ ಜೆಪಿ ನಗರದ ಕಡೆ ಮಹಿಳೆ ತೆರಳುತ್ತಿದ್ದರು. ಸಾರಕ್ಕಿ ಸಿಗ್ನಲ್ ಬಳಿ ಮಹಿಳೆ ಅಡ್ಡಗಟ್ಟಿದ ಅಹ್ಮದ್ ಅವರ ಮುಖಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ಆ್ಯಸಿಡ್ ಬಿದ್ದ ಪರಿಣಾಮ ಮಹಿಳೆಯ ಮುಖದ ಸ್ವಲ್ಪ ಭಾಗಕ್ಕೆ ಗಾಯವಾಗಿದೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂತ್ರಸ್ತೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಂತ್ರಸ್ತೆಯ ಬಲಗಣ್ಣು ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಓದಿ: ಯುವತಿ ಮೇಲೆ ಆ್ಯಸಿಡ್ ದಾಳಿ: ಪಾಗಲ್ ಪ್ರೇಮಿಯ ಪೋಷಕರು ಪೊಲೀಸ್ ವಶಕ್ಕೆ
ಮೂರನೇ ದಾಳಿ: ಕಳೆದ ಏಪ್ರಿಲ್ನಲ್ಲಿ ಆರೋಪಿ ನಾಗೇಶ್ ಪ್ರೀತಿಗೆ ನಿರಾಕರಿಸಿದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ತಮಿಳುನಾಡಿನ ಆಶ್ರಮವೊಂದರಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದರು. ಈ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಈತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮತ್ತೆ ಸೆರೆ ಹಿಡಿದಿದ್ದರು.
ಕಬ್ಬನ್‌ಪೇಟೆ 10ನೇ ಕ್ರಾಸ್ನಲ್ಲಿ ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆದಿತ್ತು. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಗಾಯಾಳು ಮತ್ತು ಆರೋಪಿ ಒಂದೇ ಕಡೆ ಕೆಲಸ ಮಾಡುತ್ತಿದ್ರು.
ಭಾನುವಾರ ಕ್ಷುಲ್ಲಕ ವಿಚಾರಕ್ಕೆ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ,ಜನತಾ ಅದಕ್ ಡೈಲೂಟೇಡ್ ಸೆಲ್ಫುರಿಕ್ ಆ್ಯಸಿಡ್ ಎರಚಿ ಕ್ರೌರ್ಯ ಮೆರೆದಿದ್ದನು. ಈಗ ಇದು ನಗರದಲ್ಲಿ ಮೂರನೇ ದಾಳಿಯಾಗಿದೆ.