ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 22 ರಂದು ದೇಶದ ಜನರು ಜನತಾ ಕರ್ಫ್ಯೂಗೆ ಬೆಂಬಲ ನೀಡಬೇಕೆಂದು ಮಾಡಿರುವ ಮನವಿಗೆ ದೇಶದ ಜನರು ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಕ್ಯಾಬ್ ಸೇವೆಗಳಾದ ಓಲಾ, ಉಬರ್ ಸೇರಿದಂತೆ ಆಟೋ ಸೇವೆಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಚಾಲಕರ ಸಂಘಗಳು ನಿರ್ಧರಿಸಿವೆ.
ಈಗಾಗಲೇ ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡುವ ಅವಕಾಶ ನೀಡಿದ್ದು, ಸಾಕಷ್ಟು ಕ್ಯಾಬ್ ಚಾಲಕರು ರಸ್ತೆಗಿಳಿಯುತ್ತಿಲ್ಲ. ಇದರ ಜೊತೆಗೆ ಭಾನುವಾರ ಇರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇನ್ನಷ್ಟು ಕ್ಯಾಬ್ಗಳು ಸ್ತಬ್ಧವಾಗಲಿವೆ.
ಆದರೆ ತೀರಾ ಕಡಿಮೆ ಪ್ರಮಾಣದಲ್ಲಿ ನಗರದಲ್ಲಿ ಖಾಸಗಿ ಕ್ಯಾಬ್ ಸೇವೆಗಳು ಇರುತ್ತವೆ ಎಂದು ಓಲಾ, ಉಬರ್ ಸಂಸ್ಥೆಯ ಮೂಲಗಳು ತಿಳಿಸಿವೆ.