ಬೆಂಗಳೂರು: ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಸರ್ಕಾರಕ್ಕೆ ಪಾವತಿ ಮಾಡಬೇಕಿರುವ ಹಣದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಒಕ್ಕಲಿಗರ ಸಂಘ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಒಕ್ಕಲಿಗರ ಸಂಘದ ನಿಯೋಗ ಭೇಟಿ ನೀಡಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕಿಮ್ಸ್ ಸಂಸ್ಥೆ ಬಾಕಿ ಪಾವತಿ ಕುರಿತು ಮಾತುಕತೆ ನಡೆಸಿತು. ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ಸರ್ಕಾರ ಜಾಗವನ್ನು ಲೀಸ್ ನೀಡಿದ್ದು, ಸರ್ಕಾರಕ್ಕೆ ಸಂಸ್ಥೆ 40 ಕೋಟಿ ರೂ. ಅಸಲನ್ನು ಒಳಗೊಂಡು ಬಡ್ಡಿ ಚಕ್ರಬಡ್ಡಿ ಸೇರಿದಂತೆ 80 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಅದರಲ್ಲಿ ಅಸಲು ಪಾವತಿಗೆ ಸಂಸ್ಥೆ ಸಿದ್ಧವಿದ್ದು, ಬಡ್ಡಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿತು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಒಕ್ಕಲಿಗರ ಸಂಘದ ಪರವಾಗಿ ನಾನೂ ಸಿಎಂಗೆ ಮನವಿ ಮಾಡಿದ್ದೇನೆ. ಬಹಳ ಕಷ್ಟ ಇದ್ದು, ಅಸಲು ಕೊಡಲಿದ್ದೇವೆ. ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡಿದರೆ ಅಸಲು ಕಟ್ಟಲು ಸಿದ್ದರಿದ್ದೇವೆ ಎಂದಿದ್ದೇವೆ. ನಮ್ಮ ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.