ಬೆಂಗಳೂರು: ರಾಜ್ಯದಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 271 ಜನ ಸಂಪೂರ್ಣ ಗುಣಮುಖರಾಗಿದ್ದಾರೆ.
ಇಂದು ರಾಜ್ಯದಲ್ಲಿ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಒಟ್ಟು 20 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಗುಣಮುಖರ ಸಂಖ್ಯೆ 22 ಇತ್ತು.
ಕಳೆದ 6 ದಿನಗಳಲ್ಲಿನ ಸೋಂಕಿತರ ಹಾಗೂ ಗುಣಮುಖರಾದವರ ಸಂಖ್ಯೆ ಹೀಗಿದೆ:
ದಿನಾಂಕ | ಸೋಂಕಿತರ ಸಂಖ್ಯೆ | ಗುಣಮುಖರ ಸಂಖ್ಯೆ |
---|---|---|
27 -4-20 | 09 | 11 |
28 -4-20 | 11 | 14 |
29-4-20 | 12 | 09 |
30-4-20 | 30 | 13 |
1-5-20 | 24 | 22 |
2-5-20 | 12 | 20 |
ಒಟ್ಟು | 98 | 89 |
ಕಳೆದ ಆರು ದಿನಗಳಲ್ಲಿ ಒಟ್ಟು 98 ಜನರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದರೆ, ಇದೇ ವೇಳೆ ರಾಜ್ಯಾದ್ಯಂತ ಒಟ್ಟು 89 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅದರಲ್ಲೂ ಕಳೆದ ಏಪ್ರಿಲ್ 27, 28 ಮತ್ತು ಇಂದು ವರದಿಯಾದ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ.
ಸದ್ಯ ರಾಜ್ಯದಲ್ಲಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 601. ಇದರಲ್ಲಿ 25 ಜನ ಸಾವನ್ನಪ್ಪಿದ್ದರೆ, ಉಳಿದ 271 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಸದ್ಯ 304 ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 297 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲೇ ಗುಣಮುಖರಾಗುವ ಸಾಧ್ಯತೆಯಿದೆ. ಉಳಿದ 7 ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಒಟ್ಟು ಕೊರೊನಾ ಪ್ರಕರಣ | 601 | 100(ಶೇ) |
ಸಾವು | 25 | 4% |
ಗುಣಮುಖ | 271 | 45% |
ಆ್ಯಕ್ಟಿವ್ ಪ್ರಕರಣ | 304 | 51% |
ಶೇಕಡವಾರು ಅಂಕಿ-ಅಂಶಗಳನ್ನು ನೋಡುವುದಾದರೆ, ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಈವರೆಗೆ ಶೇ. 45ರಷ್ಟು ರೋಗಿಗಳು ಗುಣಮುಖರಾಗಿದ್ದು, ಶೇ.4 ರೋಗಿಗಳು ಸಾವನ್ನಪ್ಪಿದ್ದಾರೆ. ಉಳಿದಂತೆ ಸದ್ಯ 51 ಶೇ. ರೋಗಿಗಳಿಗೆ ಚಿಕಿತ್ಸೆ ನಡೆಯುತ್ತಿದೆ.
ಜಿಲ್ಲಾವಾರು ಕೊರೊನಾ ಅಂಕಿ-ಅಂಶ:
ಈಗಾಗಲೇ ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ ಹಾಗೂ ಕೊಡಗು ಜಿಲ್ಲೆಗಳು ಕೊರೊನಾ ಮುಕ್ತವಾಗಿದೆ. ಅತ್ತಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಮೈಸೂರಿನಲ್ಲಿ ಸದ್ಯ ಕೊರೊನಾ ಹತೋಟಿಯಲ್ಲಿದೆ. ಉಳಿದ ಜಿಲ್ಲೆಗಳಲ್ಲೂ ಪರಿಸ್ಥಿತಿ ಹತೋಟಿಗೆ ಬರುತ್ತಿದೆ. ಮತ್ತಷ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸರ್ಕಾರದೊಂದಿಗೆ ಸ್ಪಂದಿಸಿದರೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಮತ್ತಷ್ಟು ಕಡಿಮೆಯಾಗಲಿದೆ.