ಬೆಂಗಳೂರು: ಸರ್ಕಾರಿ ವಿಜ್ಞಾನದ ಕಾಲೇಜು ಆಗಿದ್ದ ನೃಪತುಂಗ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ನೃಪತುಂಗ ವಿಶ್ವವಿದ್ಯಾಲಯದಲ್ಲಿ 'ಸಂತೃಪ್ತಿ' ಮಧ್ಯಾಹ್ನದ ಉಚಿತ ಭೋಜನದ ಉದ್ಘಾಟನೆಯನ್ನು ಬುಧವಾರ ನೆರವೇರಿಸಲಾಯ್ತು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂತೃಪ್ತಿ ಯೋಜನೆ ಮಧ್ಯಾಹ್ನದ ಊಟಕ್ಕೆ ಅಧ್ಯಾಪಕರೇ ಸ್ವಯಂ ಪ್ರೇರಣೆಯಿಂದ ಮಾಡಿದ್ದಾರೆ. ವಿಶ್ವವಿದ್ಯಾಲಯದ 250 ವಿದ್ಯಾರ್ಥಿಗಳಿಗೆ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದು, ಹಣಕಾಸಿನ ನೆರವೂ ಕೂಡ ಉಪನ್ಯಾಸಕರದ್ದೇ ಆಗಿದೆ.
ಅಂದಹಾಗೇ ಇದೇನು ಹೊಸತಲ್ಲ, ಬದಲಿಗೆ 2008 ರಿಂದ ನಡೆದುಕೊಂಡು ಬಂದ ಈ ವ್ಯವಸ್ಥೆ ಕೊರೊನಾ ಕಾರಣದಿಂದ 2 ವರ್ಷದಿಂದ ನಿಂತು ಹೋಗಿತ್ತು. ಪ್ರೋ ಶ್ರೀನಿವಾಸ ಬಳ್ಳಿ ಮೊದಲ ಕುಲಪತಿಯಾಗಿ ಬ೦ದಾಗಿನಿಂದ ಇದನ್ನು ಪುನಃ ಪ್ರಾರಂಭಿಸಲು ಅಧ್ಯಾಪಕರನ್ನು ಪ್ರೇರೇಪಿಸಿ ಬುಧವಾರದಿಂದ ಮತ್ತೆ ಶುರುವಾಗಿದೆ.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಕಾರ್ಯ ನಿರ್ವಾಹಕ ನಿರ್ದೇಶಕರಾದ ಪ್ರೊ.ಗೋಪಾಲಕೃಷ್ಣ ಜೋಶಿ, ಪ್ರೊ.ಚಂದರಗಿ, ಡಾ.ಕೆ.ಆರ್. ಕವಿತಾ, ಡಾ.ರಾಮಕೃಷ್ಣ ರೆಡ್ಡಿ, ಪ್ರೊ.ಮೋಹನಕುಮಾರ್ ಹಾಗೂ ಡಾ. ಆನಂದ್ ಮುಂತಾದವರು ಹಾಜರಿದ್ದರು.