ಬೆಂಗಳೂರು: ಎಟಿಎಂ ಮಷಿನ್ಗಳನ್ನೇ ಟಾರ್ಗೆಟ್ ಮಾಡಿ ಗ್ಯಾಸ್ ಕಟ್ಟರ್ ಮೂಲಕ ಹಣ ದೋಚುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಭಾನುವಾರ ತಡರಾತ್ರಿ ಖದೀಮರು ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಕಟ್ಟರ್ ಬಳಕೆ ಮಾಡಿಕೊಂಡು ಕೆನರಾ ಬ್ಯಾಂಕ್ ಎಟಿಎಂ ಹಣ ಕಳ್ಳತನ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಉತ್ತರ ವಿಭಾಗ ಡಿಸಿಪಿ ತನಿಖೆಗೆ ಎಸಿಪಿ ಶ್ರೀನಿವಾಸ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಮೂವರು ಆರೋಪಿಗಳನ್ನ ಸದ್ಯ ಅಂದರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಮರ್ ಜೋತ್ ಸಿಂಗ್, ಜಾಫರ್ ಸಾಧಿಕ್, ಯಹ್ಯಾ ಎ.ವಿ. ಬಂಧಿತ ಆರೋಪಿಗಳು.
ಈ ಆರೋಪಿಗಳ ಪೈಕಿ ಮೊದಲನೇ ಆರೋಪಿ ಸಮರ್ ಜೋತ್ ಸಿಂಗ್ ಈ ಮೊದಲು ಬ್ಯಾಟರಾಯನಪುರ, ಕೆ.ಪಿ. ಅಗ್ರಹಾರ ಠಾಣೆ ಸೇರಿದಂತೆ ಒಟ್ಟು 5 ಪ್ರಕರಣದಲ್ಲಿ ಜೂನ್ನಲ್ಲಿ ಜೈಲಿಂದ ಹೊರ ಬಂದಿದ್ದ. ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಮತ್ತೆ ಸ್ಕೆಚ್ ಹಾಕಿಕೊಂಡು ತದ ನಂತರ ಜೈಲಿನಲ್ಲಿ ಗಾಂಜಾ ಕೇಸ್ನಲ್ಲಿ ಬಂಧಿಯಾಗಿದ್ದ. ಎ2 ಸಾದಿಕ್ ಜೊತೆ ಸೇರಿ ನಗರದಲ್ಲಿ ಇಬ್ಬರೂ ಪ್ಲಾನ್ ಮಾಡಿ, ಜಾಫರ್ ಸ್ವಂತ ತಮ್ಮ ಯಹ್ಯಾ ಎ.ವಿ.ಯನ್ನು ಸೇರಿಸಿಕೊಂಡು ಜಾಲಹಳ್ಳಿ ಠಾಣಾ ವ್ಯಾಪ್ತಿಯ ಕೆನರಾ ಬ್ಯಾಂಕಿನ ಎಟಿಎಂ ಕಳ್ಳತನ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನ ಹೆಚ್ವಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಸಮರ್ ಜೊತ್ ಸಿಂಗ್ ಎಂಬುವವನ ಮೂಲ ಹೆಸರು ಗುರ್ ಮಿತ್ ಸಿಂಗ್ ಆಗಿದ್ದು, ಈತ 2004ರಲ್ಲಿ ಪಂಜಾಬ್ ರಾಜ್ಯದ ಸೆಕ್ಟರ್ 34 ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೂಟಾ ಸಿಂಗ್ ಎಂಬುವವನನ್ನು ಕೊಲೆ ಮಾಡಿ ಜೈಲಿಗೆ ಹೊಗಿದ್ದ. ತದ ನಂತರ ಜೈಲಿನಿಂದ ಬಿಡುಗಡೆಯಾಗಿ ತನ್ನ ಗುರುತು ಸಿಗಬಾರದೆಂದು ತನ್ನ ಹೆಸರನ್ನು ಸಮರ್ ಜೋತ್ ಸಿಂಗ್ ಎಂದು ಬದಲಾಯಿಸಿ ಕರ್ನಾಟಕ ರಾಜ್ಯಕ್ಕೆ ಬಂದು ತನ್ನ ಸಹಚರರ ಜೊತೆ ಸೇರಿ ಎಟಿಎಂ ಮಷಿನ್ಗಳನ್ನ ಗ್ಯಾಸ್ ಕಟ್ಟರ್ ಮೂಲಕ ಕಟ್ ಮಾಡಿ ಹಣ ಕಳ್ಳತನ ಮಾಡುತ್ತಿದ್ದ. ಹಾಗೆಯೇ ಇತ್ತೀಚೆಗೆ 2020ರಲ್ಲಿ ಜುನ್ 5ರಂದು ಜೈಲಿನಿಂದ ಬಿಡುಗಡೆಯಾಗಿ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ.
ಪ್ರಮುಖ ಆರೋಪಿ ಸಮರ್ ಜೋತ್ ಸಿಂಗ್ ವಿರುದ್ಧ 2019ನೇ ಸಾಲಿನಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 1 ಎಟಿಎಂ ಕಳ್ಳತನ, ಮೈಕೋ ಲೇಔಟ್ 1, ಚನ್ನಮ್ಮಕೆರೆ ಅಚ್ಚುಕಟ್ಟು 1 , ಸುಬ್ರಮಣ್ಯ ನಗರ 1 ಎಟಿಎಂ ಪ್ರಕರಣ ಪತ್ತೆ ಹಚ್ಚಿ ಬಂಧಿತ ಅರೋಪಿಗಳಿಂದ 17,34,586 ರೂ., 1 ಸ್ಕೋಡಾ ಕಾರು, 1 ಆ್ಯಕ್ಟಿವಾ ಹೊಂಡಾ, 2 ಐಫೋನ್, ಐಷಾರಾಮಿ ಬಟ್ಟೆ, 1 ರಾಯಲ್ ಎನ್ ಫೀಲ್ಡ್ ಮೊಟಾರ್ ಸೈಕಲ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್ ವಶಪಡಿಸಿಕೊಳ್ಳಲಾಗಿದೆ.
ಮೂರು ದಿನದ ಮುಂಚೆ ಸ್ಕೆಚ್:
ಈ ಆರೋಪಿಗಳು ಕಳ್ಳತನ ಮಾಡುವ ಮುಂಚೆ ಎಟಿಎಂ ಟಾರ್ಗೆಟ್ ಮಾಡಿಕೊಂಡು ಚಲನವಲನ ವೀಕ್ಷಣೆ ಮಾಡಿ ಮೊದಲು ಎಟಿಎಂನಿಂದ ಹಣ ತೆಗೆದುಕೊಳ್ಳುವ ಹಾಗೆ ನಟಿಸಿ, ಎಟಿಎಂ ನೆಟ್ವರ್ಕ್ ಕೇಬಲ್ ಕಟ್ ಮಾಡ್ತಿದ್ರು. ನಂತರ ಭಾನುವಾರ ರಾತ್ರಿ ಜನ ವೀಕೆಂಡ್ ಮೂಡಲ್ಲಿರ್ತಾರೆಂದು ಓಡಾಟ ಕಡಿಮೆಯಾದಾಗ ಗ್ಯಾಸ್ ಕಟ್ಟರ್ ಮೂಲಕ ತಮ್ಮ ಕೆಲಸ ಮುಗಿಸುತ್ತಿದ್ದರು.
ಇದರ ಬಗ್ಗೆ ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಮಾತಾನಾಡಿ, ಘಟನೆ ಸಂಬಂಧ ಪ್ರಮುಖ ಆರೋಪಿ ಪದೇ ಪದೆ ಎಟಿಎಂ ಹಣ ಕಳ್ಳತನದಲ್ಲಿ ಭಾಗಿಯಾಗಿರುವ ವಿಚಾರ ಗೊತ್ತಾಗಿದೆ. ಸದ್ಯ ಬ್ಯಾಂಕ್ ಎಟಿಎಂ ಬಳಿ ಸೆಕ್ಯುರಿಟಿ ಇಲ್ಲದೆ ಇರುವುದೇ ಇವರಿಗೆ ವರದಾನವಾಗಿದೆ. ಇದರ ಬಗ್ಗೆ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಲಾಗುವುದು. ಹಾಗೆಯೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.