ಬೆಂಗಳೂರು: ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಅವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತಡರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೆದುಳಿನ ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೊದ್ದಂ ಅವರು ಪತ್ನಿ ಹಾಗೂ ಓರ್ವ ಪುತ್ರಿ ಅಗಲಿದ್ದಾರೆ.
ಲಘು ಯುದ್ಧ ವಿಮಾನ, ಇಸ್ರೋ ಸೇರಿದಂತೆ ದೇಶದ ವಿಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಇವರು ಪ್ರೊ.ಸತೀಶ್ ಧವನ್ ಅವರ ಮೊದಲ ವಿದ್ಯಾರ್ಥಿ ಅನ್ನೋದು ವಿಶೇಷ. ಪ್ರಸ್ತುತ ಬೆಂಗಳೂರಿನ ಜವಹಾರ್‌ಲಾಲ್ ನೆಹರೂ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಐಐಎಸ್‌ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಇವರು, ಬಳಿಕ ಐಐಎಸ್‌ಸಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು, ಅಮೆರಿಕದ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದರು. ವಿಜ್ಞಾನ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರ 2013ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂದು ಹೆಬ್ಬಾಳದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.