ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಿವಾಸ ಹಾಗೂ ಕಚೇರಿ ಇರುವ ಕುಮಾರಕೃಪಾ ರಸ್ತೆ ವಾಹನ ಸಂಚಾರವಿಲ್ಲದೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.
ಸದಾ ವಾಹನಗಳ ಸಂಚಾರದಿಂದ ಗಿಜಿಗಿಡುತ್ತಿದ್ದ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಾದ ರಸ್ತೆ ಇಂದು ವಾಹನ ಸಂಚಾರವಿಲ್ಲದೆ ಸಂಪೂರ್ಣವಾಗಿ ಬಿಕೋ ಎನ್ನುತ್ತಿದೆ.
ಗೃಹ ಕಚೇರಿ ಕೃಷ್ಣಾ ಸೀಲ್ಡೌನ್ ಆಗಿದ್ದು, ಕಚೇರಿಯ ಹೊರಭಾಗದ ಸಿಬ್ಬಂದಿ ಮಾತ್ರ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ಒಳಭಾಗದ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಿಎಂ ನಿವಾಸ ಕಾವೇರಿ ಕೂಡ ಯಾವುದೇ ಚಟುವಟಿಕೆ ಇಲ್ಲದೆ ಖಾಲಿ ಖಾಲಿ ರೀತಿ ಎನ್ನುತ್ತಿದೆ.
ಸಿಎಂ ಹೋಂ ಕ್ವಾರಂಟೈನ್ ಆಗಿರುವ ಹಿನ್ನೆಲೆಯಲ್ಲಿ ಸಚಿವರು ಸೇರಿದಂತೆ ಎಲ್ಲರ ಭೇಟಿ ನಿರ್ಬಂಧಿಸಲಾಗಿದ್ದು, ಕೆಲವೇ ಕೆಲವು ಆಪ್ತ ಸಹಾಯಕರ ಜೊತೆ ಸಿಎಂ ನಿವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ. ಎಂದಿನಂತೆ ಮುಂಜಾನೆ ವಾಯು ವಿಹಾರ, ಪತ್ರಿಕೆ ಓದುವುದು, ಟಿವಿ ನೋಡುತ್ತಾ ಸಿಎಂ ಸಮಯ ಕಳೆಯುತ್ತಿದ್ದು, ಲಾಕ್ಡೌನ್ ಹಾಗೂ ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ಅವಲೋಕನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.