ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪರ್ಯಾಯ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಗ್ಗೆ ಮುಕ್ತ ನಿಲುವನ್ನು ಹೊಂದಿದೆ. ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ಕಲಿಕೆಗೆ ಮುಂದಾಗಿವೆ. 1-5ನೇ ತರಗತಿ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ ನಲಿಯೋಣ ಕಾರ್ಯಕ್ರಮ ಬಿತ್ತರ ಮಾಡಲಾಗುತ್ತಿದೆ.
ದೂರದರ್ಶನದಲ್ಲಿ ಸಂವೇದಾ ಕಾರ್ಯಕ್ರಮ ಪ್ರಸಾರಗೊಂಡಿದೆ. ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಮ್ಮದೇ ಸ್ಥಳೀಯ ಸಂಪನ್ಮೂಲಗಳ ನೆರವಿನಲ್ಲಿ ಪರಾಮರ್ಶೆ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ಜಾರಿಯಲ್ಲಿದ್ದು, ಈ ಹಂತದಲ್ಲಿ ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದೆಂದು ಸಚಿವರು ಹೇಳಿದ್ದಾರೆ.