ಬೆಂಗಳೂರು : ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯನ್ನು ಜಾರಿಗೊಳಿಸಿದೆ. ಆದ್ರೆ, ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಗೊಂಡು ಎರಡು ವರ್ಷಗಳಾಗುತ್ತಾ ಬಂದರೂ ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಗೆ ಬಲ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಈ ಸಂಬಂಧ ರಾಜ್ಯದ ಒಂದೊಂದು ಜಿಲ್ಲೆಗೂ ಒಂದೊಂದು ಉತ್ಪನ್ನವನ್ನು ಗುರುತಿಸಲಾಗಿದೆ. ಪ್ರತಿ ಜಿಲ್ಲೆಯ ಆಯಾ ಉತ್ಪನ್ನಗಳ ಲಭ್ಯತೆ, ಪ್ರಮುಖ ಬೆಳೆ, ಮಾರುಕಟ್ಟೆಯನ್ನು ಆಧರಿಸಿ ಆಯಾ ಜಿಲ್ಲೆಯ ಮುಖ್ಯ ಉತ್ಪನ್ನ ಎಂದು ಒಂದು ಉತ್ಪನ್ನವನ್ನು ಗುರುತಿಸಲಾಗಿದೆ.
ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಶೇ.35ರಷ್ಟು ಸಹಾಯಧನದ ಜೊತೆಗೆ ಕರ್ನಾಟಕ ರಾಜ್ಯ ಹೆಚ್ಚುವರಿಯಾಗಿ ಶೇ.15ರಷ್ಟು ಸಹಾಯಧನವನ್ನು ನೀಡಲಿದೆ. ಅದರಂತೆ ಪ್ರಸ್ತುತ ಯೋಜನೆಯಡಿಯಲ್ಲಿ ಕಿರು ಉದ್ಯಮಗಳನ್ನು ಸ್ಥಾಪಿಸಲು ಇಚ್ಚಿಸುವ ಫಲಾನುಭವಿಗಳಿಗೆ ಈಗಿರುವ ಶೇ.35ರ ಸಹಾಯಧನದ ಬದಲಾಗಿ ಶೇ.50ರಷ್ಟು ಒಟ್ಟು ಸಾಲ ಸಂಪರ್ಕಿತ ಸಹಾಯಧನ ಸಿಗಲಿದೆ.
ಯಾವುದೇ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ, ರೈತರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರೆ ಕಿರು ಉದ್ದಿಮೆದಾರರು ಹೊಸದಾಗಿ ಸಂಸ್ಕರಣಾ ಘಟಕಗಳ ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸಬಹುದು. ಇದಕ್ಕಾಗಿ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಗರಿಷ್ಟ 10 ಲಕ್ಷದವರೆಗೆ ಸಾಲ ದೊರೆಯುತ್ತದೆ.
ಈ ಯೋಜನೆಯಡಿ ಗರಿಷ್ಠ ಸಿಗುವ ಅನುದಾನ 10 ಲಕ್ಷ ರೂ. ಒಬ್ಬ ಫಲಾನುಭವಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. 10 ಲಕ್ಷಕ್ಕೆ 5 ಲಕ್ಷ ಸಹಾಯಧನ ಸಿಗಲಿದೆ. ಹಾಗಾದರೆ, ರೈತರು 10 ಲಕ್ಷದ ಪ್ರಾಜೆಕ್ಟ್‌ಗೆ 5 ಲಕ್ಷ ಹಣ ಬಂಡವಾಳ ಹೂಡಬೇಕು.
ಕರ್ನಾಟಕದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಪ್ರಕಾರ 20 ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳು, ಆರು ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನ, ಎರಡು ಜಿಲ್ಲೆಗಳಲ್ಲಿ ಸಮುದ್ರ ಉತ್ಪನ್ನ, ಒಂದು ಜಿಲ್ಲೆಯಲ್ಲಿ ಪೌಲ್ಟ್ರಿ ಉತ್ಪನ್ನ, ಒಂದು ಜಿಲ್ಲೆಯಲ್ಲಿ ಬೇಕರಿ ಉತ್ಪನ್ನವನ್ನು ಗುರುತಿಸಲಾಗಿದೆ.
ಯೋಜನೆಗೆ ರೈತರಿಂದ ನಿರಾಸಕ್ತಿ: ಈ ಮಹತ್ವಾಕಾಂಕ್ಷೆಯ ಯೋಜನೆಗೆ ರೈತರಿಂದ ನಿರಾಸಕ್ತಿ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಎರಡು ವರ್ಷ ಆಗುತ್ತಾ ಬಂದರೂ ಈವರೆಗೂ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿಲ್ಲ. ರೈತರು ಯೋಜನೆಗಾಗಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದೆಡೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನೀರಸವಾಗಿದ್ದರೆ, ಇನ್ನೊಂದೆಡೆ ಸಾಲ ಮಂಜೂರಾತಿಯ ಪ್ರಗತಿಯೂ ಆಮೆಗತಿಯಲ್ಲಿದೆ. ಬ್ಯಾಂಕುಗಳು ಸಾಲ ನೀಡುವಲ್ಲಿ ನಿರಾಸಕ್ತಿ ತೋರುತ್ತಿವೆ ಎಂದು ತಿಳಿದು ಬಂದಿದೆ. ಇದರಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳಹಿಡಿಯುತ್ತಿದೆ.
ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜಿಲ್ಲಾ ಸಮಿತಿ ಮೂಲಕ ಬ್ಯಾಂಕ್‌ಗಳಿಗೆ ಸಾಲದ ಶಿಫಾರಸು ಮಾಡಲಾಗುತ್ತದೆ. ಆದರೆ, ಕೃಷಿ ಇಲಾಖೆ ಕೇವಲ ಬ್ಯಾಂಕ್‌ಗಳಿಗೆ ಶಿಫಾರಸು ಮಾಡುವ ಅಧಿಕಾರವನ್ನಷ್ಟೇ ಹೊಂದಿದೆ. ಈವರೆಗೆ ಈ ಯೋಜನೆಯಡಿ ಕೇವಲ 604 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಡಿಸೆಂಬರ್‌ವರೆಗೆ ಸಾಲ ಮಂಜೂರಾಗಿರುವುದು ಕೇವಲ 86 ಮಾತ್ರ. 243 ಅರ್ಜಿಗಳು, ಇನ್ನೂ ಬ್ಯಾಂಕುಗಳ ಪರಿಶೀಲನೆ ಹಂತದಲ್ಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿ ಶೂನ್ಯ ಜಿಲ್ಲೆಗಳು : ಈ ಯೋಜನೆಯಡಿ 8 ಜಿಲ್ಲೆಗಳಲ್ಲಿನ ಪ್ರಗತಿ ಶೂನ್ಯವಾಗಿದೆ. ಅಂದರೆ 8 ಜಿಲ್ಲೆಗಳಲ್ಲಿ ಯೋಜನೆಯಡಿ ಒಬ್ಬ ವ್ಯಕ್ತಿಗೂ ಸಾಲ ಮಂಜೂರಾತಿ ಆಗಿಲ್ಲ. ವಿಜಯಪುರ (29 ಅರ್ಜಿ ಸಲ್ಲಿಕೆ), ಧಾರವಾಡ (2), ಬೆಳಗಾವಿ (15), ಕೊಪ್ಪಳ (17), ಯಾದಗಿರಿ (43), ಚಿತ್ರದುರ್ಗ (15), ರಾಯಚೂರು (7), ಚಾಮರಾಜನಗರ (5) ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಪ್ರಗತಿ ಶೂನ್ಯವಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶ ನೀಡಿದೆ.
ಇದನ್ನೂ ಓದಿ: ಸಚಿವ ಎಸ್ ಟಿ ಸೋಮಶೇಖರ್ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ಗೆ ದೂರು ನೀಡುತ್ತೇವೆ : ಕೈ ಶಾಸಕರುಗಳ ಆಕ್ರೋಶ
ಉಳಿದಂತೆ 6 ಜಿಲ್ಲೆಗಳಲ್ಲಿ ಯೋಜನೆಯಡಿ ಮಂಜೂರಾದ ಸಾಲ ಕೇವಲ ಒಬ್ಬರಿಗೆ ಮಾತ್ರ. ಕಲಬುರಗಿ (24 ಅರ್ಜಿ ಸಲ್ಲಿಕೆ), ದ.ಕನ್ನಡ (9), ಮೈಸೂರು (6), ಗದಗ (11), ಚಿಕ್ಕಮಗಳೂರು (29), ಬಾಗಲಕೋಟೆ (15) ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಪ್ರತಿ ಜಿಲ್ಲೆಯಲ್ಲಿ ಕೇವಲ ಒಂದಕ್ಕೆ ಮಾತ್ರ ಸಾಲ ಮಂಜೂರಾತಿಯಾಗಿದೆ.
ಕೋಲಾರ (6 ಅರ್ಜಿ ಸಲ್ಲಿಕೆ ), ಬೆಂಗಳೂರು ಗ್ರಾಮಾಂತರ (12) ಮತ್ತು ಚಿಕ್ಕಬಳ್ಳಾಪುರ (6)ದಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಾಲ ಮಂಜೂರಾತಿಯಾಗಿದೆ. ರಾಮನಗರದಲ್ಲಿ (45 ಅರ್ಜಿ ಸಲ್ಲಿಕೆ), ಉ.ಕನ್ನಡ (22), ಬಳ್ಳಾರಿ (9) ಮತ್ತು ಕೊಡಗು (10) ತಲಾ ಮೂವರಿಗೆ ಮಾತ್ರ ಸಾಲ ಮಂಜೂರಾತಿಯಾಗಿದೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಉಡುಪಿಯಲ್ಲಿ 30 ಅರ್ಜಿ ಸಲ್ಲಿಕೆಯಾಗಿದ್ದು, ಕೇವಲ ನಾಲ್ವರಿಗೆ ಸಾಲ ಮಂಜೂರಾತಿಯಾಗಿದೆ. ಹಾವೇರಿಯಲ್ಲಿ ಸಲ್ಲಿಕೆಯಾಗಿರುವ 9 ಅರ್ಜಿಗಳ ಪೈಕಿ ನಾಲ್ವರಿಗೆ ಮಾತ್ರ ಸಾಲ ಮಂಜೂರಾತಿಯಾಗಿದೆ. ಶಿವಮೊಗ್ಗದಲ್ಲಿ 17 ಅರ್ಜಿ ಸಲ್ಲಿಕೆಯಾಗಿದ್ದು, ಕೇವಲ ಐವರಿಗೆ ಮಾತ್ರ ಸಾಲ ಮಂಜೂರಾತಿಯಾಗಿದೆ.
ಬೀದರ್ (16), ಹಾಸನ (23)ರಲ್ಲಿ ತಲಾ ಆರು ಮಂದಿಗೆ ಮಾತ್ರ ಸಾಲ ಮಂಜೂರಾತಿಯಾಗಿದೆ. ಮಂಡ್ಯ (ಅರ್ಜಿ ಸಲ್ಲಿಕೆ 53), ತುಮಕೂರು (22) ಪೈಕಿ ತಲಾ 8 ಮಂದಿಗೆ ಸಾಲ ಮಂಜೂರಾತಿಯಾಗಿದೆ. ದಾವಣಗೆರೆಯಲ್ಲಿ 57 ಅರ್ಜಿ ಸಲ್ಲಿಕೆಯಾಗಿದ್ದು, 9 ಮಂದಿಗೆ ಸಾಲ ಮಂಜೂರಾತಿಯಾಗಿದೆ. ಇನ್ನು ಬೆಂಗಳೂರು ನಗರದಲ್ಲಿ 40 ಅರ್ಜಿ ಸಲ್ಲಿಕೆಯಾಗಿದ್ದು, 12 ಮಂದಿಗೆ ಸಾಲ ಮಂಜೂರಾತಿಯಾಗಿದೆ.