ಬೆಂಗಳೂರು: ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಹಾಗೂ ನೈಟ್ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ ಎದುರಾಗಿದ್ದು, ಸರ್ಕಾರ ಮುಜುಗರದಿಂದ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಭಾನುವಾರ ಹಾಗೂ ಸೋಮವಾರ ಕೊಂಚ ಇಳಿಕೆ ಕಂಡ ಕೋವಿಡ್ ಪ್ರಕರಣಗಳಿಂದಾಗಿ ಸರ್ಕಾರ ಸಹ ಸ್ವಲ್ಪ ಮಟ್ಟಿನ ನಿರ್ಬಂಧ ಸಡಿಲಿಕೆಗೆ ಚಿಂತನೆ ನಡೆಸಿದೆ. ಈ ಮಧ್ಯೆ ರಾಜ್ಯ ಬಿಜೆಪಿ ನಾಯಕರುಗಳೇ ಸರ್ಕಾರ ವಿಧಿಸಿರುವ ವಾರಾಂತ್ಯ ಹಾಗೂ ನೈಟ್ ಕರ್ಫ್ಯೂ ಬಗ್ಗೆ ಆಕ್ಷೇಪದ ದನಿ ಎತ್ತಿದ್ದಾರೆ.
ಒಂದೆಡೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸುವುದರ ಜೊತೆಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಪಕ್ಷಗಳ ಹೋರಾಟವನ್ನು ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂ ನೆಪದಲ್ಲಿ ತಡೆದಿರುವ ಸರ್ಕಾರ ಆಡಳಿತ ಪಕ್ಷವಾದ ಬಿಜೆಪಿ ನಾಯಕರು ಕೋವಿಡ್ ನಿಯಮವನ್ನು ಉಲ್ಲಂಘಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಸಿಎಂ ಬೊಮ್ಮಾಯಿಗೆ ಇರುಸುಮುರುಸು..!
ನಿಯಮವನ್ನ ಯಾರೇ ಉಲ್ಲಂಘಿಸಿದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಆದರೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೆಡೆ ಪ್ರತಿಪಕ್ಷಗಳ ಆರೋಪದ ಜೊತೆ ಬಿಜೆಪಿ ಪಕ್ಷದ ನಾಯಕರಿಂದಲೇ ಕೋವಿಡ್ ನಿಯಮಾವಳಿಗಳಿಗೆ ಆಕ್ಷೇಪ ವ್ಯಕ್ತವಾಗುತ್ತಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇರುಸುಮುರುಸು ಉಂಟು ಮಾಡುತ್ತಿದೆ.
ಬಿಜೆಪಿ ನಾಯಕರುಗಳ ಹೇಳಿಕೆ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನ ದೂರುಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ವೇಳೆಯೂ, ಕೋವಿಡ್ ನಿಯಮಾವಳಿಗಳನ್ನು ಸಡಿಲಿಸುವ ಸಂಬಂಧ ಮುಂದಿನ ಶುಕ್ರವಾರ ತಜ್ಞರ ಜೊತೆ ಸಭೆ ನಡೆಸುತ್ತೇನೆ. ಒಟ್ಟಾರೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಮಂಗಳವಾರ ರಾಜ್ಯದಲ್ಲಿ ಕೊಂಚ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಮೂರನೇ ಅಲೆಯಲ್ಲಿ ಕಾಡುತ್ತಿರುವ ಕೋವಿಡ್ ಸ್ವರೂಪ ಸಾಕಷ್ಟು ಬದಲಾಗಿದೆ. ರೋಗ ಅಷ್ಟೊಂದು ಮಾರಕವಾಗಿ ಗೋಚರಿಸುತ್ತಿಲ್ಲ. ಆಸ್ಪತ್ರೆ ವಾಸ ಅನುಭವಿಸುವವರ ಸಂಖ್ಯೆ ಸಹ ಗಣನೀಯವಾಗಿ ಕಡಿಮೆಯಾಗಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ತೀವ್ರ ಆಕ್ಷೇಪ ಹಾಗೂ ಸಾಂಕ್ರಾಮಿಕ ರೋಗದ ಆತಂಕ ಕೊಂಚ ನಿವಾರಣೆಯಾಗಿರುವ ಹಿನ್ನೆಲೆ ಸರ್ಕಾರ ಸಹ ಹೆಚ್ಚು ಮುಜುಗರಕ್ಕೆ ಒಳಗಾಗುವ ಬದಲು ನಿಯಮಾವಳಿಗಳನ್ನು ಇನ್ನಷ್ಟು ಸಡಿಲಿಸಲು ತೀರ್ಮಾನಿಸಿದೆ ಎನ್ನಲಾಗ್ತಿದೆ.
ಬಿಜೆಪಿಯಲ್ಲಿ ವಿರೋಧ
ಉದ್ಯಮಿಗಳು, ವ್ಯಾಪಾರಸ್ಥರು ಜತೆಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ತೀವ್ರ ವಿರೋಧದ ನಡುವೆ ರಾಜ್ಯ ಸರ್ಕಾರ ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂವನ್ನು ತೆಗೆಯುವ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ ಸ್ವಪಕ್ಷೀಯ ನಾಯಕರ ಹೇಳಿಕೆಗಳು ಸಾಕಷ್ಟು ಮುಜುಗರ ತರಿಸುತ್ತಿದೆ.
ಒಂದೆಡೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ಅವಶ್ಯಕತೆ ಇಲ್ಲ. ಪ್ರಕರಣಗಳು ಹೆಚ್ಚಾದರೆ ಅಲ್ಲಿ ಕ್ರಮ ಕೈಗೊಳ್ಳುವ ಕಾರ್ಯ ಮಾಡಬೇಕು. ವಾರಾಂತ್ಯ ಕರ್ಫ್ಯೂ ಸಹ ಅನಗತ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿ ಇವೆ ಎಂಬ ಕಾರಣಕ್ಕೆ ಇಡೀ ರಾಜ್ಯದಲ್ಲಿ ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂ ವಿಧಿಸುವುದು ಎಷ್ಟು ಸರಿ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮ ವ್ಯವಹಾರಗಳಿಗೆ ತೊಂದರೆಯಾಗುತ್ತಿದ್ದು, ದಯವಿಟ್ಟು ನಮಗೆ ಇನ್ನಷ್ಟು ಸಮಸ್ಯೆ ನೀಡಬೇಡಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ, ಲಾಕ್‌ಡೌನ್ ಹಾಗೂ ಇತರೆ ನಿರ್ಬಂಧಗಳು ಈಗಾಗಲೇ ಜನರನ್ನು ಸಾಕಷ್ಟು ಕಂಗೆಡಿಸಿದೆ. ಸಾಕಷ್ಟು ಪ್ರಮಾಣದಲ್ಲಿ ಜನರ ಜೀವನ ದುಸ್ತರವಾಗಿದೆ. ಇದು ಇನ್ನಷ್ಟು ಹಾಳಾಗಲು ಬಿಡಬಾರದು ಎಂದು ಹೇಳಿದ್ದಾರೆ.
ಗೋವಾ ಚುನಾವಣಾ ಪ್ರಚಾರದಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿ, ಕೋವಿಡ್ ಪರಿಣಾಮ ಸಾಕಷ್ಟು ಕಡಿಮೆ ಇದೆ. ಹೀಗಿರುವಾಗ ನಾವು ಲಾಕ್‌ಡೌನ್ ಮಾಡಿ, ಜನರ ಜೀವನವನ್ನು ಯಾಕೆ ಇನ್ನಷ್ಟು ಹದಗೆಡಿಸಬೇಕು? ವಾರಾಂತ್ಯ ಹಾಗೂ ನೈಟ್ ಕರ್ಫ್ಯೂ ಹಾಗೂ ಲಾಕ್‌ಡೌನ್ ಹೇರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ಸಲಹೆ ಎಂದಿದ್ದಾರೆ.
ಪ್ರತಿಪಕ್ಷಗಳಿಂದಲೂ ವಿರೋಧ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದು, ವಾರಾಂತ್ಯ ಹಾಗೂ ನೈಟ್ ಕರ್ಫ್ಯೂವನ್ನು ಜಾರಿಗೊಳಿಸುವಂತೆ ತಜ್ಞರು ಅಭಿಪ್ರಾಯ ನೀಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಸಂಕಷ್ಟಕ್ಕೀಡಾದವರಿಗೆ ಯಾವುದಾದರೂ ಒಂದು ಕಾರ್ಯಕ್ರಮ ತರಬೇಕು ಎನ್ನುವುದು ನನ್ನ ಸಲಹೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ತಪ್ಪಿತಸ್ಥ ಎಲ್ಲರಿಗೂ ಶಿಕ್ಷೆ ಆಗಬೇಕು. ಎನ್. ಆರ್. ರಮೇಶ್ ಕೂಡ ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಕೋವಿಡ್ ನಿಯಮವನ್ನು ಮುರಿದಿದ್ದಾರೆ. ಇವರ ವಿರುದ್ಧ ಎಲ್ಲಿಯೂ ದೂರು ದಾಖಲು ಮಾಡಿಲ್ಲ. ಆದ್ರೆ ನಮ್ಮ ನಾಯಕರ ಮೇಲೆ ದೂರು ದಾಖಲಿಸಿದ್ದಾರೆ. ಈ ರೀತಿ ಮಾಡೋದ್ರಿಂದ ಸಮಾಜಕ್ಕೆ ಯಾವ ಸಂದೇಶ ನೀಡೋಕೆ ಹೊರಟಿದ್ದಾರೆ. ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸುತ್ತೇನೆ ಎಂದರು.
ಒಟ್ಟಾರೆ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂಗೆ ರಾಜ್ಯದ ಸರ್ವ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಹೇಳಿಕೆಗಳು ವ್ಯಕ್ತವಾಗಲಿವೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲು ಹೆಚ್ಚಿದ ಒತ್ತಡ.. ವಿವಿಧ ಸಂಘ-ಸಂಸ್ಥೆಗಳಿಂದ ಸಭೆ..