ಬೆಂಗಳೂರು : ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಬದಲು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಚಿಕಿತ್ಸೆ ನೀಡುವುದು ಹೈಕಮಾಂಡ್ ಲೆಕ್ಕಾಚಾರವಾಗಿದೆ. ನಾಯಕತ್ವ ಬಿಕ್ಕಟ್ಟು ಬಗೆಹರಿಸಲು ಆಗಮಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮೂರು ದಿನಗಳ ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ಹಲವು ನಾಯಕರು, ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಈ ಕುರಿತು ವರಿಷ್ಠರಿಗೆ ವರದಿ ನೀಡಲಿದ್ದಾರೆ.
ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಇಲ್ಲ. ಎಲ್ಲರ ಖಾತೆಗಳಲ್ಲೂ ಕೈಯ್ಯಾಡಿಸುತ್ತಿರುವ ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಲಕ್ಷ್ಮಣ ರೇಖೆ ಹಾಕಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಬದಲಾವಣೆ, ಸಂಪುಟ ಪುನಾರಚನೆ ಸಾಧ್ಯತೆ : ಪಕ್ಷದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ. ಇದರ ಜೊತೆಗೆ ಸಂಪುಟದಲ್ಲಿ ಕೆಲವರಿಗೆ ಕೊಕ್ ಕೊಟ್ಟು ಹೊಸಬರಿಗೆ ಅವಕಾಶ ಮಾಡಿ ಕೊಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಮೂರು ದಿನಗಳಿಂದ ಸಭೆ ನಡೆಸಿರುವ ಅರುಣ್ ಸಿಂಗ್, ದೆಹಲಿಗೆ ಹೋಗಿ ಇಡೀ ಬೆಳವಣಿಗೆಗಳು, ನಾಯಕರು, ಸಚಿವರ ಹಾಗೂ ಶಾಸಕರ ಅಭಿಪ್ರಾಯಗಳನ್ನ, ಬೇಸರ-ಸಿಟ್ಟು, ಸಿಎಂ ಪರ-ವಿರೋಧ ವಿಷಯಗಳ ಕುರಿತು ವರಿಷ್ಠರಿಗೆ ಮಾಹಿತಿ ನೀಡಲಿದ್ದಾರೆ.
ಅರುಣ್ ಸಿಂಗ್ ಅವರ ವರದಿ ಆಧರಿಸಿ ರಾಜ್ಯ ಬಿಜೆಪಿಗೆ ಸೂಚನೆಗಳು ರವಾನೆಯಾಗಲಿವೆ. ಅದರಲ್ಲಿ ಮುಖ್ಯಮಂತ್ರಿ ಬಣ ಹಾಗೂ ವಿರೋಧಿ ಬಣಕ್ಕೂ ಚುರುಕುಮುಟ್ಟಿಸುವ ಅಂಶಗಳು ಇದ್ದೇ ಇರುತ್ತವೆ ಎಂಬುದು ಖಚಿತ. ಸದ್ಯಕ್ಕೆ ಬಿಜೆಪಿ ಬಿಕ್ಕಟ್ಟು ಶಮನ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಿಕ್ಕಟ್ಟಿನಿಂದ ಸಿಎಂ ಯಡಿಯೂರಪ್ಪ ಪಾರಾಗುವುದು ನಿಶ್ಚಿತ. ಆದರೆ, ಸರ್ಕಾರಕ್ಕೆ ದೆಹಲಿ ವರಿಷ್ಠರು ಸರ್ಜರಿ ಮಾಡುವ ಸಾಧ್ಯತೆ ಇದೆ.
ಹಲವಾರು ಬದಲಾವಣೆ ಸಾಧ್ಯತೆ : ಸಂಪುಟದಲ್ಲಿ ಕೆಲವರನ್ನು ಬದಲಾಯಿಸುವ ಹಾಗೂ ಕೆಲವು ಆಯ್ದ ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸ ನಡೆಯಲಿದೆ. ಸಚಿವರ ಖಾತೆಗಳಲ್ಲಿ ಮುಖ್ಯಮಂತ್ರಿ ಕುಟುಂಬದ ಯಾರೂ ಹಸ್ತಕ್ಷೇಪ ಮಾಡದಂತೆ ನಿಗಾ ಇರಿಸಲು ವರಿಷ್ಠರು ಹೊಸ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ವೀರಶೈವ- ಲಿಂಗಾಯತ ಮಹಾಸಭೆ ಈ ಬಿಕ್ಕಟ್ಟಿನೊಳಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಟಚ್ ಮಾಡಬಾರದು ಎಂದು ಹೇಳಿದೆ.
ಆತುರದ ಕ್ರಮದ ಬ್ರೇಕ್ : ಇನ್ನು, ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ಅನೇಕ ಸ್ವಾಮೀಜಿಗಳು ಈಗಾಗಲೇ ಯಡಿಯೂರಪ್ಪ ಪರ ಹೇಳಿಕೆಗಳನ್ನು ಕೊಟ್ಟು, ಸಮುದಾಯದ ಅಗ್ರನಾಯಕನಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಹೈಕಮಾಂಡ್ ಈ ಬಿಕ್ಕಟ್ಟನ್ನು ಜೀವಂತ ಇಟ್ಟು, ತಾತ್ಕಾಲಿಕವಾಗಿ ತೇಪೆ ಹಚ್ಚುವ ಕೆಲಸ ಮಾಡಲಿದೆ ಎನ್ನುತಿವೆ ಉನ್ನತ ಮೂಲಗಳು. ಸದ್ಯಕ್ಕೆ ಆತುರದ ಕ್ರಮ ಬೇಡ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಾಯಕತ್ವ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಅವರು ಮೊದಲ ದಿನವೇ ನೀಡಿದ ಹೇಳಿಕೆ.
ಸಂಪುಟ ಪುನಾರಚನೆ ಸಾಧ್ಯತೆ : ಯಡಿಯೂರಪ್ಪ ಅವರು ಕೋವಿಡ್ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ, ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ. ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಅಸಮರ್ಥ ಸಚಿವರನ್ನು ಕೈಬಿಟ್ಟು ಪಕ್ಷನಿಷ್ಠ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಬದಲಾವಣೆ ಮಾಡುವುದು ರಿಸ್ಕ್ ಎನ್ನುವುದನ್ನು ವರಿಷ್ಠರು ಮನಗಂಡಿದ್ದಾರೆ.
ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳುವ ಬಗ್ಗೆ ಹೈಕಮಾಂಡ್ ಮನಸ್ಸು ಮಾಡಿದೆ ಎನ್ನಲಾಗಿದೆ. ಈಗ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಅರುಣ್ ಸಿಂಗ್ ಭೇಟಿ ಸೀಮಿತವಾಗಿದೆ. ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳಿಗೆ ವರಿಷ್ಠರು ಉತ್ತರ ನೀಡುತ್ತಾರೆ. ಅಲ್ಲಿಯವರೆಗೆ ಯಾರೂ ಬಹಿರಂಗವಾಗಿ ಮಾತನಾಡುವುದು ಬೇಡ ಎಂಬ ಸಂದೇಶ ನೀಡುವ ಮೂಲಕ ಸದ್ಯದ ಗೊಂದಲಕ್ಕೆ ತಾತ್ಕಾಲಿಕ ವಿರಾಮ ನೀಡಲು ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಯತ್ನಿಸಿದ್ದಾರೆ.
ಆ ಮೂಲಕ ರಾಜ್ಯ ಬಿಜೆಪಿಯಲ್ಲಿ ಎದ್ದ ವಿವಾದದ ಚೆಂಡು ಹೈಕಮಾಂಡ್ ಅಂಗಳ ತಲುಪಿದಂತಾಗಿದೆ. ಈ ಮಧ್ಯೆ ಅರುಣ್ ಸಿಂಗ್ ಭೇಟಿಯ ನಂತರ ಪರಿಸ್ಥಿತಿ ತಮ್ಮ ಪರವಾಗಿದೆ ಎಂದು ಯಡಿಯೂರಪ್ಪ ಬಣ ಖುಷಿಯಾಗಿದ್ದರೆ, ಆಟ ಈಗಷ್ಟೇ ಶುರುವಾಗಿದೆ ಎಂದು ಭಿನ್ನರ ಬಣ ವ್ಯಾಖ್ಯಾನಿಸತೊಡಗಿದೆ.