ದೊಡ್ಡಬಳ್ಳಾಪುರ, ಬೆಂಗಳೂರು: ತಾಲೂಕು ಹಲವು ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ಕಚೇರಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಧ್ವಜ ನೀತಿ ಸಂಹಿತೆಯ ಪಾಲನೆಯಾಗಿಲ್ಲ. ರಾಷ್ಟ್ರಧ್ವಜ ಹಾರಿಸಿಲ್ಲ ಮತ್ತು ಮಾಸಿದ ಬಾವುಟ ಹಾರಿಸುವುದರ ಮೂಲಕ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರಿ ಕಚೇರಿಗಳ ಆವರಣದಲ್ಲಿ ಪ್ರತಿ ನಿತ್ಯ ರಾಷ್ಟ್ರಧ್ವಜ ಹಾರಿಸಲು ಅದರದ್ದೇ ಆದ ಧ್ವಜ ನೀತಿ ಸಂಹಿತೆ ಇದೆ. ರಾಷ್ಟ್ರ ಧ್ವಜವನ್ನ ಪ್ರತಿನಿತ್ಯ ಬೆಳಗ್ಗೆ ಆರೋಹಣ ಮತ್ತು ಅವರೋಹಣ ಮಾಡುವ ಸಲುವಾಗಿ ದಿನದ ಭತ್ಯೆ ಆಧಾರದಲ್ಲಿ ಫ್ಲಾಗ್ ಮ್ಯಾನ್ರನ್ನ ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲೂ ನೇಮಕ ಮಾಡಲಾಗುತ್ತದೆ.
ಆದರೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವು ಗ್ರಾಮಪಂಚಾಯ್ತಿ ಕಟ್ಟಡಗಳ ಆವರಣದಲ್ಲಿ ಧ್ವಜ ಹಾರಿಸಲು ಸರ್ಕಾರದಿಂದ ತರಬೇತಿ ಪಡೆದ ಫ್ಲಾಗ್ ಮ್ಯಾನ್ ಇದ್ದರೂ ಬಾವುಟಗಳ ಹಾರಿಸದೇ ಮತ್ತು ಕೆಲವೊಂದು ಕಚೇರಿಗಳ ಮುಂದೆ ಹಲವು ತಿಂಗಳುಗಳಾದರೂ ಮಾಸಿದ ಧ್ವಜವನ್ನ ಧ್ವಜ ಸ್ಥಂಭದಲ್ಲಿ ಬಿಟ್ಟು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಕಂಡು ಬಂದಿದೆ.
ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮಪಂಚಾಯ್ತಿ ಆವರಣದಲ್ಲಿ ಮಾಸಿದ ಬಾವುಟ ಹಾರಾಟ, ಹುಲಿಕುಂಟೆ ಗ್ರಾಮಪಂಚಾಯ್ತಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ, ಹೆಗ್ಗಡೆಹಳ್ಳಿ ಪಂಚಾಯ್ತಿ ಆವರಣದಲ್ಲಿ, ಸರ್ಕಾರಿ ಕಚೇರಿ ಸಮಯದಲ್ಲೇ ಬಾವುಟ ಹಾರಾಟ ಮಾಡದೇ ರಾಷ್ಟ್ರಧ್ವಜಕ್ಕೆ ಅಪಮಾನಮಾಡಲಾಗಿದೆ.
ಇದೇ ವಿಚಾರವಾಗಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಲಕ್ಷ್ಮಿಪತಿ, ನಿತ್ಯ ಬೆಳಗ್ಗೆ ಮತ್ತು ಸಂಜೆ ಆರೋಹಣ ಮತ್ತು ಅವರೋಹಣ ಮಾಡುವುದರ ಜೊತೆಗೆ ಧ್ವಜವನ್ನ ಮಡಚಿಡುವುದಕ್ಕೆ ತರಬೇತಿ ನೀಡಿ ವ್ಯಕ್ತಿ ನೇಮಕ ಮಾಡಲಾಗುತ್ತದೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸದೆ ಇರುವುದು ಮತ್ತು ಮಾಸಿದ, ಹಾಳಾದ ಬಾವುಟ ಹಾರಿಸುವುದು ಅಕ್ಷಮ್ಯ ಅಪರಾಧ. ಅಂಥವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಓದಿ: ಮುಂಬೈ: 75 ಸಾವಿರ ತಿರಂಗಾ ಹಾರಿಸಲು ಮುಸ್ಲಿಂ ಸಂಘಟನೆಯಿಂದ ಸಿದ್ಧತೆ